ಕರ್ನಾಟಕ

karnataka

By ETV Bharat Karnataka Team

Published : Jun 22, 2024, 7:27 PM IST

Updated : Jun 22, 2024, 11:08 PM IST

ETV Bharat / state

ಬೆಂಗಳೂರು: ಸಾಹಿತಿ ಕಮಲಾ ಹಂಪನಾಗೆ ಸಾಹಿತಿಗಳ ಅಶ್ರುತರ್ಪಣ - tribute to kamala hampana

ಸಾಹಿತಿ ಡಾ ಕಮಲಾ ಹಂಪನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆಯನ್ನು ರವೀಂದ್ರಕಲಾಕ್ಷೇತ್ರದಲ್ಲಿ ಮಾಡಲಾಗಿತ್ತು. ರಾಜ್ಯ ಹಿರಿಯ ಸಾಹಿತಿಗಳು ಕಮಲಾ ಹಂಪನಾ ಅವರ ಅಂತಿಮ ದರ್ಶನ ಪಡೆದು, ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಸಾಹಿತಿ ಕಮಲಾ ಹಂಪನಾಗೆ ಸಾಹಿತಿಗಳ ಅಶ್ರುತರ್ಪಣ
ಸಾಹಿತಿ ಕಮಲಾ ಹಂಪನಾಗೆ ಸಾಹಿತಿಗಳ ಅಶ್ರುತರ್ಪಣ (ETV Bharat)

ಕಮಲಾ ಹಂಪನಾಗೆ ಸಾಹಿತಿಗಳ ಅಶ್ರುತರ್ಪಣ (ETV Bharat)

ಬೆಂಗಳೂರು: ಇಂದು ನಿಧನರಾದ ಹಿರಿಯ ಸಾಹಿತಿ ಡಾ ಕಮಲಾ ಹಂಪನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ರವೀಂದ್ರಕಲಾಕ್ಷೇತ್ರದಲ್ಲಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಿ.ಎಂ. ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವಾರು ಸಾಹಿತಿಗಳು, ಗಣ್ಯರು ಅಂತಿಮ ದರ್ಶನ ಪಡೆದರು.

ಈ ವೇಳೆ ಈಟಿವಿ ಭಾರತ ಜೊತೆಗೆ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ಕರ್ನಾಟಕದಲ್ಲಿ ಹಂಪನಾ ದಂಪತಿಗಳು ಚಿರಪರಿಚಿತ. ನಾಡೋಜ ಪ್ರಶಸ್ತಿ ಪಡೆದಿದ್ದ ಅವರು ಕನ್ನಡದ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸದ್ಗುಣ ಅನುಕರಣೀಯ. ಸಾವಿನ ನಂತರವೂ ಅವರು ತಮ್ಮ ದೇಹವನ್ನು ದಾನ ಮಾಡಿ ಆದರ್ಶಪ್ರಾಯರಾಗಿದ್ದಾರೆ. ಅವರು ಕ್ರಾಂತಿಕಾರಿ ಚಿಂತನೆ ಹೊಂದಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾರ್ವಜನಿಕವಾಗಿ ಹೇಗೆ ಬದುಕಬೇಕು ಎನ್ನದು ತೋರಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾಧನೆ ಜೈನ ಸಾಹಿತ್ಯದಲ್ಲಿ ಅಪಾರವಾಗಿದೆ. ರಾಮಾಯಣ, ಮಹಾಭಾರತಗಳನ್ನು ಶಾಂತಿಯುತವಾದ ವಿಧದಲ್ಲಿ ಪುನರ್ ನಿರ್ಮಾಣಗೊಂಡಿದ್ದ ಪುರಾತನ ಜೈನ ಸಾಹಿತ್ಯವನ್ನು ಹೊರ ತಂದವರು ಕಮಲಾ ಹಂಪನಾ ಆಗಿದ್ದರು. ಜೈನ ಸಾಹಿತ್ಯೆ ವೈಶಿಷ್ಟ್ಯವನ್ನು ಜಗತ್ತಿಗೆ ತೋರಿಸಿದರು ಎಂದರು.

ಅಂತರ್ ಜಾತಿಯ ವಿವಾಹವಾಗಿ ಉನ್ನತ ಆದರ್ಶವನ್ನು ಮೆರೆದರು. ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಬದುಕಿದ್ದಾರೆ. ನನ್ನ ಅತ್ಯಂತ ಆತ್ಮೀಯರಾಗಿದ್ದರು. ಅವರ ಹೆಸರಿನಲ್ಲಿ ಸಚಿವೆಯಾಗಿದ್ದಾಗ ಪ್ರಶಸ್ತಿಯನ್ನು ಸ್ಥಾಪಿಸಿದೆ. ಅವರು ಹಲವು ಸಂಗತಿಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ರಾಜಕೀಯವಾಗಿ, ಸಾಹಿತ್ಯಿಕವಾಗಿ ಹಾಗೂ ಹತ್ತು ಹಲವು ಸಂಗತಿಗಳಲ್ಲಿ ನನ್ನ ಜೊತೆ ನಿಲ್ಲುತ್ತಿದ್ದರು ಎಂದು ನೆನೆದರು.

ಹಿರಿಯ ಸಾಹಿತಿ ಪ್ರೊ.ಕೆ. ಈ ರಾಧಾಕೃಷ್ಣ ಮಾತನಾಡಿ, ನನಗೆ ತಾಯಿಯ ಮಮಕಾರ ತೋರಿದ್ದರು. ಅವರು ಉದಾತ್ತ ವ್ಯಕ್ತಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ನಕ್ಷತ್ರವಾಗಿದ್ದರು. ಸಾಹಿತ್ಯದ ಮೂಲ ಸೆಲೆಯಾದ ಯಥಾಸ್ಥಿತಿವಾದವನ್ನು ವಿರೋಧಿಸುವುದಾಗಿದೆ, ಅದನ್ನು ಆಕ್ರೋಶವಿಲ್ಲದೆ ಶಾಂತ ಸ್ವರೂಪದಲ್ಲಿ ತಮ್ಮ ಜೀವನ ಶೈಲಿಯಿಂದ ಸಾಹಿತ್ಯದಿಂದ ತೋರಿಸಿದ್ದರು. ಅವರು ಸ್ತ್ರೀವಾದಿ ಅಲ್ಲದೆ ಮನುಷ್ಯವಾದಿಯಾಗಿದ್ದರು. ಮಹಿಳೆಯರ ಸ್ಥಾನಮಾನದ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತಿದ್ದರು. ಕುವೆಂಪು ಅವರ ಅನುಯಾಯಿಯಾಗಿ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬದುಕಿದರು ಎಂದು ಸ್ಮರಿಸಿದರು.

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಾಹಿತಿ, ಪದ್ಮಾ ಶೇಖರ್ ಮಾತನಾಡಿ, ನಾವು ಮೈಸೂರು ವಿಶ್ವವಿದ್ಯಾಲಯಕ್ಕೆ ಒಂದೇ ಬಾರಿ ಪ್ರೊಫೆಸರ್​ಗಳಾಗಿ ಸೇರಿಕೊಂಡೆವು. ಅವರು ಕನಸನ್ನು ನನಸು ಮಾಡುವ ವ್ಯಕ್ತಿಯಾಗಿದ್ದರು, ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡಿದ್ದರು. ಹೃದಯವಂತರಾಗಿದ್ದರು ಎಂದು ತಮ್ಮ ನುಡಿ ನಮನ ಸಲ್ಲಿಸಿದರು.

ಸಾಹಿತಿ ಕಮಲಾ ಹಂಪನಾಗೆ ಅಶ್ರುತರ್ಪಣ (ETV Bharat)

ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ಮುಖಂಡ ಉಗ್ರಪ್ಪ ಮಾತನಾಡಿ, ಕಮಲಾ ಹಂಪನಾ ಪಾವಗಡ ತಾಲೂಕಿನವರಾಗಿದ್ದರೆ, ಅತ್ಯಂತ ಬಡತನವಿದ್ದರೂ ಕಷ್ಟ ಪಟ್ಟು ಉನ್ನತ ಶಿಕ್ಷಣ ಪಡೆದರು. ತಮ್ಮದೇ ಸಾಹಿತ್ಯ ಕೃಷಿಯನ್ನು ಮಾಡಿದರು. ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದ ಸಾಹಿತ್ಯಿಕ ಲೋಕದಲ್ಲಿ ಹೆಸರು ಮಾಡಿದ್ದರು. ಪರಿಶಿಷ್ಟ ಪಂಗಡದವರಾಗಿದ್ದರೂ ಎಲ್ಲ ವರ್ಗಕ್ಕೆ ಸಲ್ಲುವಂತಹ ವ್ಯಕ್ತಿಯಾಗಿದ್ದರು. ಜೈನ ಸಾಹಿತ್ಯದಲ್ಲಿ ಕೃಷಿಯನ್ನು ಮಾಡಿದ್ದರು. ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವನ್ನು ಬೇರೆ ರೀತಿಯಲ್ಲಿ ತರ್ಜುಮೆ ಮಾಡಿ, ಸಮ ಸಮಾಜದ ಪರಿಕಲ್ಪನೆಯನ್ನು ಬಿತ್ತಿದ್ದರು ಎಂದರು.

ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಲ್ ಶಂಕರ್ ಮಾತನಾಡಿ, ಸಾಹಿತ್ಯ ಲೋಕದಲ್ಲಿ ಅತಿ ದೊಡ್ಡ ಸಾಧನೆ ಕಮಲಾ ಹಂಪನಾ ಮಾಡಿ ಪರಿಪೂರ್ಣ ಬದುಕನ್ನು ಸವೆಸಿ ಇಹಲೋಕ ತ್ಯಜಿಸಿದ್ದಾರೆ. ಸಾಹಿತ್ಯ ಲೋಕದ ವಿಮರ್ಶೆಗಳು, ಲೇಖನಗಳು, ಸಂಶೋಧನೆಗಳಲ್ಲಿ ಹಂಪನಾ ದಂಪತಿಗಳ ಕೊಡೆಗೆ ಅಪಾರವಾಗಿದೆ. ಅವರು ಕರ್ನಾಟಕ ಕಂಡ ಅತ್ಯುತ್ತಮ ಜೋಡಿ. ಅಂತರ್ ಧರ್ಮಿಯ ಮದುವೆಯನ್ನು ಮಾಡಿಕೊಂಡರೂ ಎಲ್ಲವನ್ನೂ ಸರಿದೂಗಿಸಿಕೊಂಡು ಬದುಕಿದರು ಎಂದು ಹೇಳಿದರು.

ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್ ಗೋವಿಂದಸ್ವಾಮಿ ಮಾತನಾಡಿ, ಕಮಲಾ ಹಂಪನಾ ನನ್ನ ಪರೋಕ್ಷ ಗುರುಗಳಿಗಿದ್ದರು. ಅವರು ಪಂಪ ಮಹಾಕವಿಯ ಮನುಷ್ಯ ಜಾತಿ ತಾನೊಂದೇ ವಲಂ ಉಕ್ತಿಯಂತೆ ಬದುಕಿದರು. ಹಂಪನಾ ದಂಪತಿ ಸರ್ವ ಜನರನ್ನು ಸಮಾನವಾಗಿ ಕಂಡು ಬದುಕಿದರು. ಅವರ ಮಾನವೀಯತೆಯ ಹೋರಾಟ ಇಂದಿಗೂ ನಮಗೆ ಮಾದರಿಯಾಗಿದೆ ಎಂದು ನಮನ ಸಲ್ಲಿಸಿದರು.

ಕಮಲಾ ಹಂಪನಾ ಅವರ ಅಭಿಮಾನಿಯಾಗಿದ್ದೇನೆ. ಅವರ ನಿಧನದಿಂದ ಕನ್ನಡ ಸಾಹಿತ್ಯಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಿವೃತ್ತ ಐಟಿ ಅಧಿಕಾರಗಳ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎಸ್. ಈಶ್ವರಯ್ಯ ಸಂತಾಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಮಲಾ ಹಂಪನಾಗೆ ಅಂತಿಮ ನಮನ: ಕನ್ನಡದ ಉತ್ತಮ ಸಾಹಿತಿಯನ್ನು ಕಳೆದುಕೊಂಡಿದ್ದೇವೆ - ಸಿಎಂ ಸಿದ್ದರಾಮಯ್ಯ - CM Siddaramaiah

Last Updated : Jun 22, 2024, 11:08 PM IST

ABOUT THE AUTHOR

...view details