ಬೆಂಗಳೂರು : ಪರವಾನಗಿ ನವೀಕರಣ ವಿಳಂಬ, ಹೊಸದಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲು ಹಣಕ್ಕೆ ಬೇಡಿಕೆ ಸೇರಿದಂತೆ ಅಬಕಾರಿ ಇಲಾಖೆ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆ, ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಇಲಾಖೆ ಕಚೇರಿಗಳ ಮೇಲೆ ಲೋಕಾಯುಕ್ತ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಲೋಕಾಯುಕ್ತ ಬಿ. ಎಸ್ ಪಾಟೀಲ್, ಉಪಲೋಕಾಯುಕ್ತ ಬಿ.ವೀರಪ್ಪ ಅವರು ಖುದ್ದು ಅಬಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದರು. ನ್ಯಾಯಾಲಯದ ಅನುಮತಿ ಪಡೆದು ಇಲಾಖೆಯ ನಗರದ ಎಲ್ಲಾ ವಲಯ ಕಚೇರಿ ಸೇರಿದಂತೆ 61 ಕಡೆ ದಾಳಿ ನಡೆಸಿದರು.
ಸರ್ಕಾರಿ ಕಚೇರಿಯಲ್ಲಿ ಗಾಂಜಾ, ಮದ್ಯ ಬಾಟಲಿ, ಸಿಗರೇಟ್ : ಯಶವಂತಪುರ ಹಾಗೂ ಮೈಸೂರು ರಸ್ತೆಯ ಬ್ಯಾಟರಾಯನಪುರ ಕಚೇರಿಗಳ ಮೇಲೆ ದಾಳಿ ನಡೆಸಿ ಲೋಕಾಯುಕ್ತರ ತಂಡವು ಪರಿಶೀಲಿಸಿದಾಗ ಸುಮಾರು 250 ಗ್ರಾಂ ಗಾಂಜಾ ಪತ್ತೆಯಾಗಿದೆ. ಅಲ್ಲದೆ, 10ಕ್ಕಿಂತ ಹೆಚ್ಚು ಮದ್ಯದ ಬಾಟಲಿಗಳು ಹಾಗೂ ಸಿಗರೇಟ್ಗಳು ದೊರೆತಿವೆ. ನಗರದ ವಿವಿಧ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ಹಲವು ದಾಖಲಾತಿಗಳನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
"ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 132 ದೂರುಗಳು ಬಂದಿದ್ದವು. ಅಧಿಕಾರಿಗಳ ತಂಡ ರಚಿಸಿಕೊಂಡು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಇಂದು ದಾಳಿ ನಡೆಸಲಾಯಿತು. ಈ ವೇಳೆ ಗಾಂಜಾ, ಮದ್ಯದ ಬಾಟಲಿ ಹಾಗೂ ಸಿಗರೇಟ್ ಪತ್ತೆಯಾಗಿವೆ.
ಈ ಬಗ್ಗೆ ಪ್ರಶ್ನಿಸಿದಾಗ ಸಮಂಜಸವಾದ ಉತ್ತರ ನೀಡಿಲ್ಲ. ಅಲ್ಲದೇ, ಬಾರ್ ಅಂಡ್ ರೆಸ್ಟೋರೆಂಟ್ ಪರವಾನಗಿ ವಿಳಂಬ ಧೋರಣೆ, ಲೈಸೆನ್ಸ್ ನೀಡಲು ಹಣಕ್ಕೆ ಬೇಡಿಕೆ ಸೇರಿದಂತೆ ಮೊದಲಾದ ದೂರುಗಳು ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ. ದಾಳಿ ಸಮಗ್ರ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದು ಲೋಕಾಯುಕ್ತ ಬಿ. ಎಸ್ ಪಾಟೀಲ್ ತಿಳಿಸಿದ್ಧಾರೆ.
ಇದನ್ನೂ ಓದಿ : ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ್ ತಂಡ - LOKAYUKTA JUSTICE B S PATIL