ದಾವಣಗೆರೆ:ಪ್ರಜ್ವಲ್ ವಿದೇಶಕ್ಕೆ ಪರಾರಿ ಆಗುವರೆಗೆ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ? ಇದನ್ನು ವ್ಯವಸ್ಥಿತವಾಗಿ ಈ ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ದಾವಣಗೆರೆ ನಗರದ ಬಂಟರ ಭವನದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ಸಂಸದನಾಗಿದ್ದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಧಿಕಾರದಲ್ಲಿ, ಆತ ಬಿಜೆಪಿಗೆ ಏನು ಸಂಬಂಧ? 2019ರಲ್ಲಿ ಯಾರ ಮೈತ್ರಿ ವೇಳೆ ಸಂಸದರಾಗಿದ್ದ ಪ್ರಜ್ವಲ್, ಈಗ ತನಿಖೆ ಮಾಡೋರು ಯಾರು, ಕರ್ನಾಟಕದಲ್ಲಿ ಇರುವ ಸರ್ಕಾರ ಯಾವುದು?, ಸಂಸದ ಪರಾರಿ ಆಗುವರೆಗೆ ವರೆಗೆ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ ಎಂದು ಪ್ರಶ್ನಿಸಿದರು.
ವ್ಯವಸ್ಥಿತವಾಗಿ ಈ ಪೆನ್ಡ್ರೈವ್ ಪ್ರಕರಣ ಮುಚ್ಚಿ ಹಾಕಬೇಕು ಅಂತ ಕೆಲವೊಂದು ಅಡ್ಜಸ್ಟ್ಮೆಂಟ್ ರಾಜಕಾರಣಿಗಳ ಉದ್ದೇಶವಿದೆ. ಈ ರಾಜ್ಯದಲ್ಲಿ ಪಿಎಸ್ಐ ಹಗರಣ ಏನಾಯ್ತು, ಏನಾದರೂ ಹೊರಗೆ ಬಿತ್ತಾ, ಗಾಂಜಾ ಅಫೀಮ್ ಕೇಸ್ ಏನಾಯ್ತು, ಪೋಕ್ಸೋ ಎರಡು ಪ್ರಕರಣ ದಾಖಲಾದರೂ ಏನು ಆಗ್ತಿಲ್ಲ. ನೀವು ಅಡ್ಜಸ್ಟ್ಮೆಂಟ್ ರಾಜಕೀಯದಲ್ಲಿ ಇದ್ದೀರಾ, ನಿಮಗೆ ಆಗಲ್ಲಾ ಅಂದ್ರೆ ಸಿಬಿಐಗೆ ಕೊಡಿ, ನಾವು ಸಿಬಿಐಗೆ ಡಿಮಾಂಡ್ ಮಾಡ್ತಾ ಇದ್ದೇವಿ, ನೀವು ಕೊಡ್ತಾ ಇಲ್ಲ. ಚುನಾವಣೆ ಹಿನ್ನೆಲೆ ಈ ಕೆಲಸ ಆಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಎರಡು ಫ್ಯಾಕ್ಟರಿ:ರಾಜ್ಯದಲ್ಲಿ ಎರಡು ಫ್ಯಾಕ್ಟರಿಗಳಿವೆ. ಅದರಲ್ಲೊಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಫ್ಯಾಕ್ಟರಿ ಹೆಸರು 8ನೇ ತಾರೀಖು ನಾನು ಹೇಳುತ್ತೇನೆ. ಆ ಎರಡು ಫ್ಯಾಕ್ಟರಿಗಳ ಕೆಲಸಾನೆ ಅದು. ಇಬ್ಬರು ಬೇರೆ ಬೇರೆ ಪಾರ್ಟಿಯಲ್ಲಿ ಇದ್ದಾರೆ. ಇಬ್ಬರದು ಸಿಡಿ ಬಿಸಿನೆಸ್ ಒಂದೇ ಇದೆ. ಇವರಿಬ್ಬರೂ ಅಲ್ಕಾ ರಾಜಕಾರಣ ಮಾಡ್ತಾ ಇದ್ದಾರೆ. ಎರಡು ಕುಟುಂಬಗಳು ರಾಜ್ಯದ ರಾಜಕಾರಣ ಹಾಳು ಮಾಡ್ತಿದ್ದಾರೆ. ತನಿಖೆಯಿಂದ ಪೆನ್ ಡ್ರೈವ್ ಯಾರು ಬಿಡುಗಡೆ ಮಾಡಿದ್ದು ಅಂತಾ ಗೊತ್ತಾಗಲಿದೆ.
ಮಹಿಳೆಯರ ಗೌರವ ದೃಷ್ಟಿಯಿಂದ ಗೌಪ್ಯವಾಗಬೇಕಿತ್ತು. ಉದ್ದೇಶಪೂರ್ವಕವಾಗಿ ಚುನಾವಣೆ ವೇಳೆ ಬ್ಲಾಕ್ ಮೇಲ್ ಮಾಡಲು ಬಳಕೆ ಮಾಡಿದ್ದಾರೆ. ಭಯ ಬೀಳಿಸಿ ಆ ಕುಟುಂಬ ಮರ್ಯಾದೆ ಕಳೆಯಲು ಮಾಡಿದ್ದಾರೆ. ಚುನಾವಣೆ ಮುಂಚಿತವಾಗಿಯೇ ಬಿಡುಗಡೆ ಮಾಡಬೇಕಿತ್ತು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದಾಗ ಬಿಡುಗಡೆ ಮಾಡಬೇಕಿತ್ತು. ಈಗ ಚುನಾವಣೆ ಉದ್ದೇಶದಿಂದ ಬಿಡುಗಡೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.