ದಾವಣಗೆರೆ: ಟಿಸಿ (ವಿದ್ಯುತ್ ಪ್ರವರ್ತಕ) ರಿಪೇರಿ ಮಾಡುವಾಗ ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ದಾವಣಗೆರೆ ತಾಲ್ಲೂಕಿನ ಮಳಲ್ಕೆರೆ ಗ್ರಾಮದಲ್ಲಿ ಜರುಗಿದೆ. ಮುತ್ತುರಾಜ್(32) ಮೃತರು.
ಕಳೆದೆರಡು ದಿನದಿಂದ ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಟಿಸಿ ಕೆಟ್ಟು ಹೋಗಿರಬಹುದೆಂದು ತಿಳಿದು ಮುತ್ತುರಾಜ್ ರಿಪೇರಿ ಮಾಡಲು ಕಂಬ ಏರಿದ್ದರು. ಕೂತು ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಅದೇ ಜಾಗದಲ್ಲೇ ಮೃತಪಟ್ಟಿದ್ದಾರೆ ಎಂದು ಹದಡಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಮಾಹಿತಿ ನೀಡಿದ್ದಾರೆ.
ಮುತ್ತುರಾಜ್ ಮೃತದೇಹ ಗಂಟೆಗಟ್ಟಲೆ ಟಿಸಿ ಮೇಲೆಯೇ ನೇತಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಕೋಲು ಹಿಡಿದು ಕೆಳಗೆ ಬೀಳಿಸಿದ್ದಾರೆ. ರಿಪೇರಿ ವೇಳೆ ವಿದ್ಯುತ್ ಕಡಿತಗೊಳಿಸಲಾಗಿತ್ತೋ ಇಲ್ಲವೋ ಎಂಬುದು ಅನುಮಾನಕ್ಕೆ ಕಾರಣವಾಗಿದೆ.
"ಮುತ್ತುರಾಜ್ ಟಿಸಿ ರಿಪೇರಿ ಮಾಡುವ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಶಾಕ್ನಿಂದ ಮೃತಪಟ್ಟಿದ್ದಾರೆ. ಇವರು ಕಂದಗಲ್ಲು, ಮಳಲ್ಕೆರೆ ಲೈನ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮಳಲ್ಕೆರೆ ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಟಿಸಿ ರಿಪೇರಿ ಮಾಡುವಾಗ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ" ಎಂದು ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕನಸಿನ ಹೋಟೆಲ್ ನಿರ್ಮಾಣದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು