ಬೆಂಗಳೂರು: "ಪೂರ್ವಾನುಮತಿ ವಿಚಾರವಾಗಿ ರಾಜ್ಯಪಾಲರು ಹೇಗೆ ಕಾದು ನೋಡ್ತಾರೋ ಹಾಗೆಯೇ ನಾವು ಕಾದು ನೋಡುತ್ತೇವೆ" ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಗೃಹ ಸಚಿವ ಪರಮೇಶ್ವರ್ (ETV Bharat) ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ವಿರುದ್ಧದ ಖಾಸಗಿ ದೂರಿನ ಸಂಬಂಧ ಇಂದು ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿ, "ಮೊದಲು ತೀರ್ಪು ಬರಲಿ, ಆಮೇಲೆ ಏನು ಮಾಡಬೇಕು ಅಂತ ನಾವು ತೀರ್ಮಾನ ಮಾಡುತ್ತೇವೆ. ಗವರ್ನರ್ ಸಹ ಅದರ ಆಧಾರದ ಮೇಲೆ ತೀರ್ಮಾನ ಮಾಡ್ತಾರಾ? ಅದರ ಹೊರತಾಗಿ ತೀರ್ಮಾನ ಮಾಡ್ತಾರಾ ಗೊತ್ತಿಲ್ಲ. ಒಂದಕ್ಕೊಂದಕ್ಕೆ ಲಿಂಕ್ ಮಾಡೋದಕ್ಕೆ ನಾವು ಹೋಗೋದಿಲ್ಲ. ಅದು ಅವರಿಗೆ ಬಿಟ್ಟಿದ್ದು. ಗವರ್ನರ್ ಆಫೀಸಿಗೆ ಬಿಟ್ಟಿದ್ದು" ಎಂದರು.
"ಗವರ್ನರ್ ಆಫೀಸ್ ಅನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ನಾವು ಮೊದಲಿನಿಂದಲು ಎಚ್ಚರಿಕೆ ಕೊಡುತ್ತಿದ್ದೇವೆ. ಅವರ ಶೋಕಾಸ್ ನೋಟಿಸ್ಗೆ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡು ಅವರಿಗೆ ಅಡ್ವೈಸ್ ಮಾಡಿದ್ದೆವು. ಇದು ತಪ್ಪು, ನೀವು ಮಾಡಿರುವುದು ಸರಿ ಇಲ್ಲ ಅಂತ ಅಡ್ವೈಸ್ ಮಾಡಿದ್ದೆವು. ಪ್ರಾಸಿಕ್ಯೂಷನ್‌ಗೆ ಕೊಡಬೇಡಿ ರಿಜೆಕ್ಟ್ ಮಾಡಿ ಅಂತ ನಾವು ಅಡ್ವೈಸ್ ಮಾಡಿದ್ದೇವೆ. ಅವರು ಏನೂ ನಿರ್ಧಾರ ಕೈಗೊಂಡಿಲ್ಲ. ನಾವು ಕಾದು ನೋಡುತ್ತೇವೆ. ಅವರು ಹೇಗೆ ಕಾದು ನೋಡ್ತಾರೋ ಹಾಗೆಯೇ ನಾವು ಕಾದು ನೋಡುತ್ತೇವೆ" ಎಂದರು.
ಶಾಸಕ ಚೆನ್ನಾರೆಡ್ಡಿ ಭೇಟಿ:ಯಾದಗಿರಿ ಪಿಎಸ್‌ಐ ಪರಶುರಾಮ್ ಸಾವು ಪ್ರಕರಣದಲ್ಲಿ ಆರೋಪಕ್ಕೊಳಗಾಗಿರುವ ಶಾಸಕ ಚೆನ್ನಾರೆಡ್ಡಿ ಗೃಹ ಸಚಿವ ಪರಮೇಶ್ವರ್ ಅವರನ್ನು ಅವರ ಸದಾಶಿವನಗರ ನಿವಾಸದಲ್ಲಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಭೇಟಿ ಬಳಿಕ ಮಾಧ್ಯಮಗಳ ಕಣ್ತಪ್ಪಿಸಿ ಹಿಂಬದಿ ಗೇಟ್‌ನಿಂದ ಚೆನ್ನಾರೆಡ್ಡಿ ತೆರಳಿದರು. ಈ ಬಗ್ಗೆ ಮಾತನಾಡಿದ ಸಚಿವ ಜಿ.ಪರಮೇಶ್ವರ್, "ಶಾಸಕ ಚೆನ್ನಾರೆಡ್ಡಿ ಬಂದು ಭೇಟಿ ಮಾಡಿದ್ರು. ನನ್ನ ಹುಟ್ಟುಹಬ್ಬದ ದಿನ ಸಿಕ್ಕಿರಲಿಲ್ಲ. ಹಾಗಾಗಿ ಇವತ್ತು ಬಂದು ಭೇಟಿ ಮಾಡಿ ಹೋದರು. ಕೇಸ್ ತನಿಖೆ ನಡೆಯುತ್ತಿದೆ. ಅದರ ಬಗ್ಗೆ ಯಾವುದೇ ಚರ್ಚೆ ಇವತ್ತು ಮಾಡಲಿಲ್ಲ" ಎಂದರು.
ಎಸ್ಕಾರ್ಟ್ ಕೊಟ್ಟಿಲ್ಲವಾದರೆ ಸೂಚನೆ:ಇದೇ ವೇಳೆ ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಸ್ಕಾರ್ಟ್ ನೀಡದಿರುವ ಆರೋಪದ ಕುರಿತು ಮಾತನಾಡಿ, "ಅವರಿಗೆ ಏನು ಕೊಡಬೇಕು ಕೊಡ್ತಾರೆ. ಡಿಪಿಆರ್ ನವರು ಪ್ರೋಟೋ ಕಾಲ್ ಪ್ರಕಾರ ನೀಡ್ತಾರೆ. ನನಗೆ, ನಾರಾಯಣಸ್ವಾಮಿಗೆ ಪ್ರತ್ಯೇಕ ನಿಯಮ ಇಲ್ಲ. ಮೇಲ್ಮನೆ ವಿಪಕ್ಷ ನಾಯಕರಿಗೆ ಎಲ್ಲ ಸವಲತ್ತು ಸಿಗಲಿದೆ. ಕೊಟ್ಟಿಲ್ಲವೆಂದರೆ ನಾನು ಸೂಚನೆ ಕೊಡ್ತೇನೆ" ಎಂದರು.
ಸ್ವಾತಂತ್ರ್ಯ ದಿನಾಚರಣೆಗೆ ಕಟ್ಟೆಚ್ಚರ ವಹಿಸಲಾಗಿದೆ:ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಸಹಜವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ಬಾರಿಯೂ ಈ ಭದ್ರತೆ ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರ ನೀಡುವ ಸೂಚನೆ ಹಾಗೂ ನಮ್ಮದೇ ಗುಪ್ತಚರ ಮಾಹಿತಿ ಆಧಾರದಲ್ಲಿ ಸಹಜವಾಗಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಎಲ್ಲಾ ಜಿಲ್ಲೆಗಳಿಗೂ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರತಿಬಾರಿ ಸ್ವಾತಂತ್ರ್ಯ ದಿನಾಚರಣೆಯ ಮುಂಚಿತವಾಗಿ ಹಾಗೂ ನಂತರದ ಎರಡು ದಿನ ಕಟ್ಟೆಚ್ಚರ ವಹಿಸಲಾಗಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ಪ್ರಾಸಿಕ್ಯೂಷನ್‌ಗೆ ಅನುಮತಿಸಿದರೆ ಕಾನೂನು ಹೋರಾಟ: ಗೃಹ ಸಚಿವ ಪರಮೇಶ್ವರ್ - MUDA CASE