ಬೆಂಗಳೂರು:ಅಬಕಾರಿ ಪರವಾನಗಿಗಳ ನವೀಕರಣದ ಸಮಯದಲ್ಲಿ ಸನ್ನದುದಾರರಿಗೆ ಕಿರುಕುಳ ನೀಡಬಾರದು. ನೆರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಕಳ್ಳಸಾಗಾಣಿಕೆ ಮೂಲಕ ನುಸುಳುವ ಮದ್ಯವನ್ನು ಕಡ್ಡಾಯವಾಗಿ ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇಲಾಖೆಯ ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ನಿಗದಿ ಪಡಿಸುವ ಗುರಿ ತಲುಪಲು ಅಧಿಕಾರಿಗಳು ಗರಿಷ್ಠ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು. ಚುನಾವಣಾ ನೀತಿ ಸಂಹಿತೆ ಕಾರಣದಿಂದ ತೆರಿಗೆ ಸಂಗ್ರಹ ಬೆಳವಣಿಗೆ ದರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಸಿಎಂಗೆ ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಸಿಎಂ, ಮುಂದಿನ ದಿನಗಳಲ್ಲಿ ಇದನ್ನು ಭರ್ತಿ ಮಾಡುವಂತೆ ಸೂಚಿಸಿದರು.
ಇಲಾಖೆಯಲ್ಲಿ ಕಾನ್ಸ್‌ಟೇಬಲ್, ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಾಗೂ ವಾಹನಗಳ ಅಗತ್ಯತೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಕರ ಸಮಾಧಾನ ಯೋಜನೆಯಡಿ 5.10 ಕೋಟಿ ರೂ. ವಸೂಲಾಗಿದ್ದು, ಯೋಜನೆಯನ್ನು ಇನ್ನಷ್ಟು ಕಾಲ ವಿಸ್ತರಿಸುವಂತೆ ಅಧಿಕಾರಿಗಳು ಕೋರಿದರು.