ದಾವಣಗೆರೆ: ಗೃಹ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಐಸಿ ಹೌಸಿಂಗ್ ಫೈನಾನ್ಸ್ನ ಲೋನ್ ವಿಭಾಗದ ವ್ಯವಸ್ಥಾಪಕನ ಮೇಲೆ ಹಲ್ಲೆ ಮಾಡಿ, ಅವರನ್ನು ಅಪಹರಿಸಿರುವ ಘಟನೆ ಜಿಲ್ಲೆಯಲ್ಲಿ ಮೇ 31ರಂದು ಸಂಜೆ ನಡೆದಿದೆ. ಈ ವಿಷಯ ತಿಳಿದು ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ವ್ಯವಸ್ಥಾಪಕನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಶರಣ್ ಎಂಬುವರೇ ಹಲ್ಲೆಗೊಳಗಾಗಿ ಅಪಹರಣಕ್ಕೆ ಒಳಗಾದವರು. ಪೊಲೀಸರು ಹೊನ್ನಾಳಿಯ ವಡ್ಡಿನಕೆರೆ ಹಳ್ಳದ ಬಳಿ ರಕ್ಷಿಸಿದ್ದಾರೆ. ಇವರಿಗೆ ಕೆಲ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ, ಅಪಹರಣ ಹಲ್ಲೆ ಸಂಬಂಧ ಶಿಕಾರಿಪುರ ಮೂಲದ ನಾಗರಾಜ, ನಾಸಿರ್ ಎಂಬುವರನ್ನು ಬಂಧಿಸಲಾಗಿದೆ. ಚಂದನ್ ಮತ್ತು ವಿಶ್ವನಾಥ್ ಎಂಬ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಘಟನೆಯ ಸೆರೆ:ದಾವಣಗೆರೆನಗರದ ಪಿಬಿ ರಸ್ತೆಯಲ್ಲಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಕಚೇರಿ ಇದೆ. ಹರಿಹರದಲ್ಲಿರುವ ಮನೆಯೊಂದರ ಮೇಲೆ ಸಾಲ 49.60 ಲಕ್ಷ ರೂ. ಸಾಲ ಮಂಜೂರಾಗಿತ್ತು. ಆದರೆ, ಕೊಟ್ಟ ದಾಖಲೆ ನಕಲಿ ಎಂದು ತಿಳಿದು ಬಂದಿತ್ತು. ಹೀಗಾಗಿ 49.60 ಲಕ್ಷದ ಚೆಕ್ನ್ನು ವಿತರಣೆ ಮಾಡಿಲ್ಲ. ಇದರಿಂದ ಮೇ 31ರಂದು ಕಚೇರಿಗೆ ಬಂದು ಆರೋಪಿಗಳು ಗಲಾಟೆ ಮಾಡಿದ್ದಾರೆ. ಅಲ್ಲದೇ, ಕಚೇರಿಯಿಂದ ಕೆಳಗಡೆ ಕರೆದುಕೊಂಡು ಬಂದು ವ್ಯವಸ್ಥಾಪಕರಾದ ಶರಣ್ ಅವರ ಮೇಲೆ ಹಲ್ಲೆ ಮಾಡಿದ್ಧಾರೆ. ನಂತರ ಅವರು ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಅಪಹರಿಸಿದ್ದಾರೆ. ಇದರ ದೃಶ್ಯಗಳು ಸಹ ಸಿಸಿಟಿವಿಯಲ್ಲಿ ಸೆರೆಯಾಗಿವೆ.