ಬೆಂಗಳೂರು:''ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲಿ, ಆಗ ಅವರಿರುವ ದೇಶಗಳು ಅವರನ್ನು ಹೊರಹಾಕುತ್ತವೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ''ಪಾಸ್‌ಪೋರ್ಟ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ ಬರೆದಿದ್ದರು. ಎರಡನೇ ಪತ್ರವನ್ನೂ ಬರೆದಿದ್ದಾರೆ. ದೇವೇಗೌಡರು ಪ್ರಜ್ವಲ್ ಬರಲಿ ಎಂದು ಪತ್ರ ಬರೆದಿದ್ದಾರೆ. ಇದು ನಮಗೆ ಗೊತ್ತಾಗಿದೆ. ಅದು ಅವರ ಕುಟುಂಬದ ಆಂತರಿಕ ವಿಚಾರ. ಸಾರ್ವಜನಿಕ ಜೀನವದಲ್ಲಿ ಅವರ ಪತ್ರಕ್ಕೆ ಗೌರವ ಕೊಡಬೇಕು. ಈಗಲಾದ್ರೂ ಪ್ರಜ್ವಲ್ ಬರಬೇಕು. ತನಿಖೆ ಎದುರಿಸಬೇಕು. ನಾನು ಅವರಿವರ ಟ್ವೀಟ್ಗೆ ಉತ್ತರ ಕೊಡಲ್ಲ. ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಎಸ್ಐಟಿ ತನಿಖೆಯಲ್ಲಿ ಲೋಪವಿದೆಯೇ ಹೇಳಲಿ. ಆಗ ನಾವು ಗಮನ ಹರಿಸ್ತೇವೆ. ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಅವರು ಏನೂ ರೆಸ್ಪಾನ್ಸ್ ಮಾಡಿಲ್ಲ'' ಎಂದರು.
ನೇಹಾ, ಅಂಜಲಿ ಹತ್ಯೆ ಪ್ರಕರಣಗಳ ವಿಚಾರ:ನೇಹಾ, ಅಂಜಲಿ ಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿ, ''ಲಾ ಆ್ಯಂಡ್ ಆರ್ಡರ್ ಹಾಳಾಗದಂತೆ ನೋಡಿಕೊಂಡಿದ್ದೇವೆ. ಇವರ ಕಾಲದಲ್ಲಿ ಮರ್ಡರ್ ಆಗಿರಲಿಲ್ವೇ? ನಾವು ಆಗಲಿ ಅಂತ ಬಯಸಲ್ಲ. ಕೇಸ್ನಲ್ಲಿ ಚಾರ್ಜ್ ಮಾಡಿದ್ದೇವೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಶಾಂತಿಯುತ ಚುನಾವಣೆ ಮಾಡಿದ್ದೇವೆ. ಗಣೇಶ ಉತ್ಸವದಲ್ಲಿ ಗಲಾಟೆ ತಡೆದಿದ್ದೇವೆ. ರಂಜಾನ್ ವೇಳೆ ಗಲಾಟೆ ಹತ್ತಿಕ್ಕಿದ್ದೇವೆ. ಬೇರೆ ಸಂದರ್ಭದಲ್ಲಿ ಗಲಾಟೆ ಆಗ್ತಿದ್ವು. ಒಳ್ಳೆಯ ಆಡಳಿತವನ್ನು ನಾವು ಕೊಡ್ತಿದ್ದೇವೆ'' ಎಂದು ಪ್ರತಿಕ್ರಿಯಿಸಿದರು.