ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ಬಳಿ ಇಂದು ಮುಂಜಾನೆ ಚಿರತೆ ಪ್ರತ್ಯಕ್ಷವಾಗಿದ್ದು, ಕ್ಯಾಂಪಸ್‌ನ ಸಿಸಿಟಿವಿಯಲ್ಲಿ ಅದರ ಚಲನವಲನ ಸೆರೆಯಾಗಿದೆ. ಇದರಿಂದ ಆಡಳಿತ ಮಂಡಳಿಯು ತನ್ನ ಉದ್ಯೋಗಿಗಳಿಗೆ ಕ್ಯಾಂಪಸ್ ಪ್ರವೇಶ ಮಾಡದಂತೆ ಹಾಗೂ ವರ್ಕ್ ಫ್ರಮ್ ಹೋಂ ಮಾಡುವಂತೆ ಸೂಚನೆ ನೀಡಿದೆ.
ಈ ಮಾಹಿತಿ ಆಧರಿಸಿ 30 ರಿಂದ 40 ಮಂದಿ ಇರುವ ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಅರವಳಿಕೆ ತಜ್ಞರ ತಂಡ ಹಾಗೂ ಚಿರತೆ ಕಾರ್ಯಪಡೆಯ ತಂಡ ಇನ್ಫೋಸಿಸ್ ಕ್ಯಾಂಪಸ್ಗೆ ಆಗಮಿಸಿದ್ದು, ಚಿರತೆಯ ಚಲನವಲನ ಆಧರಿಸಿ ಅದನ್ನು ಸೆರೆ ಹಿಡಿಯಲು ಕಾರ್ಯ ತಂತ್ರವನ್ನು ರೂಪಿಸಿದೆ. ಡಿಸಿಎಫ್ ಬಸವರಾಜ್ ನೇತೃತ್ವದಲ್ಲಿ ಈ ಸೆರೆ ಕಾರ್ಯಾಚರಣೆ ನಡೆಯುತ್ತಿದೆ.
ಅರಣ್ಯ ಇಲಾಖೆಯಿಂದ ಚಿರತೆ ಸೆರೆ ಕಾರ್ಯಾಚರಣೆ (ETV Bharat) ಮೈಸೂರು ವಿಭಾಗದ ಮುಖ್ಯ ಅರಣ್ಯಾಧಿಕಾರಿ ಮಾಲತಿ ಪ್ರಿಯ ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿ, "ಇನ್ಫೋಸಿಸ್ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಡಿಸಿಎಫ್ ಬಸವರಾಜ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಪತ್ತೆಯಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ, ಚಿರತೆ ಕಾರ್ಯಪಡೆ ಹಾಗೂ ಮೈಸೂರು ಪ್ರಾದೇಶಿಕ ವಲಯದ ಸಿಬ್ಬಂದಿಯಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಡ್ರೋನ್ ಕ್ಯಾಮರಾ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 350 ಎಕರೆಯಷ್ಟು ವಿಶಾಲವಾದ ಕ್ಯಾಂಪಸ್ ಆಗಿರುವುದರಿಂದ ಸೆರೆ ಹಿಡಿಯಲು ಆಯಕಟ್ಟಿನ ಜಾಗಗಳನ್ನು ಗುರುತಿಸಿ ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದೆ. ಕ್ಯಾಂಪಸ್‌ನ ಎಲ್ಲ ಸಿಬ್ಬಂದಿಗೆ ಎಚ್ಚರಿಕೆಯಿಂದ ಇರುವ ಬಗ್ಗೆ ಹಾಗೂ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಪಶುವೈದ್ಯಕೀಯ ತಂಡ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು, ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಡಿಸಿಎಫ್ ಬಸವರಾಜ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕರುವಿನ ರಕ್ತದ ರುಚಿ ನೋಡಿ ಮತ್ತೆ ಬೇಟೆಗೆ ಬಂದ ಚಿರತೆ ಸೆರೆ : ವಿಡಿಯೋ