ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಮನಸೂರ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಮನಸೂರ ಗ್ರಾಮದ ಕುಬೇರಪ್ಪ ಮಡಿವಾಳಪ್ಪ ಅಗಸರ ಎಂಬವರ ಆಕಳ ಕರು ಕೊಂದು ತಿಂದಿರುವ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ಪರಿಶೀಲಿಸಿದರು.
ಮನಸೂರ, ಮನಗುಂಡಿ ಹಾಗೂ ಸುತ್ತಲಿನ ಐದಾರು ಗ್ರಾಮಗಳಲ್ಲಿ ಡಂಗುರ ಸಾರುವಂತೆ ಹಾಗೂ ಗ್ರಾಮಸ್ಥರು ಒಬ್ಬಂಟಿಯಾಗಿ ಓಡಾಡದಂತೆ ಜಾಗೃತಿ ಮೂಡಿಸುವ ಕುರಿತು ತಹಶೀಲ್ದಾರ ಡಾ.ದುಂಡಪ್ಪ ಹೂಗಾರ ಹಾಗೂ ವಲಯ ಅರಣ್ಯ ಅಧಿಕಾರಿ ಪ್ರದೀಪ ಪವಾರ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಚಿರತೆ ದಾಳಿಯಿಂದ ಹಸು ಕಳೆದುಕೊಂಡ ಮಾಲೀಕರಿಗೆ ಶೀಘ್ರದಲ್ಲಿ ಪರಿಹಾರ ನೀಡುವಂತೆಯೂ ಇದೇ ವೇಳೆ ಸೂಚಿಸಿದರು.
ಚಿರತೆ ಸೆರೆ ಹಿಡಿಯಲು ಇಡಲಾಗಿದ್ದ ಬೋನ್ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ಗ್ರಾಮಸ್ಥರ ಜೊತೆ ಮಾತನಾಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಯಾರೂ ಆತಂಕಪಡಬಾರದು ಎಂದು ಮನವಿ ಮಾಡಿದರು. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಒಬ್ಬಂಟಿಯಾಗಿ ತಿರುಗಾಡದಂತೆ ಜಿಲ್ಲಾಧಿಕಾರಿ ತಿಳಿಸಿದರು.