ಮೈಸೂರು:ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಮಹಾರಾಣಿ ಕಾಲೇಜಿನಲ್ಲಿ ಬಿರುಸಿನಿಂದ ಸಾಗಿದ್ದು, ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಜೂನ್ 3ರಂದು ಮತದಾನ ನಡೆದಿತ್ತು.
ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ನಡೆಯುತ್ತಿದೆ. ಪ್ರತೀ ಕ್ಷೇತ್ರಕ್ಕೂ 14 ಟೇಬಲ್ಗಳಿದ್ದು, ಒಬ್ಬ ಮೇಲ್ವಿಚಾರಕ ಹಾಗೂ ಸಹಾಯಕರ ನೇತೃತ್ವದಲ್ಲಿ ಎಣಿಕೆ ನಡೆಯುತ್ತಿದೆ. ಚಲಾವಣೆಯಾದ ಒಟ್ಟು ಮತಗಳನ್ನು ಮಿಶ್ರಣ ಮಾಡಿ ಅವುಗಳನ್ನು 25 ಬ್ಯಾಲೆಟ್ ಪೇಪರ್ಗಳಲ್ಲಿ ಬಂಡಲ್ ಮಾಡಿದ ನಂತರ ಎಣಿಕೆ ಮಾಡಲಾಗುತ್ತಿದೆ. ಪ್ರಾಶಸ್ತ್ಯ ಮತಗಳ ಅನುಸಾರ ಎಣಿಕೆ ಕಾರ್ಯ ನಡೆಯುತ್ತಿದೆ.
ಆರಂಭಿಕ ಟ್ರೆಂಡ್‌ನಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ 1554 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರಿಗಿಂತ ಮುಂದಿದ್ದರೆ, ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಬೋಜೇಗೌಡ, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಅವರಿಗಿಂತ ಮುನ್ನಡೆಯಲ್ಲಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಆರಂಭವಾಗಿದ್ದು, ಮುನ್ನಡೆಗಳ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
3 ವಿಧಾನ ಪರಿಷತ್ ಕ್ಷೇತ್ರಗಳ ಮಾಹಿತಿ:ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿ ಮತ್ತು ಮತದಾರರ ಮಾಹಿತಿ ಹೀಗಿದೆ.
1). ದಕ್ಷಿಣ ಶಿಕ್ಷಕರ ಕ್ಷೇತ್ರ:ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಬರುತ್ತದೆ. ಒಟ್ಟು 20,549 ಮತದಾರರಿದ್ದಾರೆ. ಈ ಪೈಕಿ 18,979 ಮತ ಚಲಾವಣೆಯಾಗಿದೆ. ಶೇ.88.07 ಮತದಾನವಾಗಿದೆ. ಕ್ಷೇತ್ರದಲ್ಲಿ 11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮರೀತಿಬ್ಬೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.
2). ನೈರುತ್ಯ ಶಿಕ್ಷಕರ ಕ್ಷೇತ್ರ:ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ, ಉಡುಪಿ ಜಿಲ್ಲೆಗಳು ಈ ವ್ಯಾಪ್ತಿಗೆ ಬರುತ್ತದೆ. 23,402 ಮತದಾರರಿದ್ದು, 19,320 ಶಿಕ್ಷಕರು ಮತ ಚಲಾಯಿಸಿದ್ದಾರೆ. ಒಟ್ಟಾರೆ ಶೇ.82.56ರಷ್ಟು ಮತದಾನವಾಗಿದೆ. 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಎಸ್.ಎಲ್.ಬೋರೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ನಡುವೆ ಸ್ಪರ್ಧೆಯಿದೆ.
3). ನೈರುತ್ಯ ಪದವೀಧರ ಕ್ಷೇತ್ರ:ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳು ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇಲ್ಲಿ 66,529 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು ಮತದಾರರ ಸಂಖ್ಯೆ 85,089. ಶೇ.78.19ರಷ್ಟು ಮತದಾನವಾಗಿದೆ. 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಡಾ.ಧನಂಜಯ ಸಾರ್ಜೀ ಹಾಗೂ ಆಯನೂರು ಮಂಜುನಾಥ್ ನಡುವೆ ನೇರ ಸ್ಪರ್ಧೆಯಿದೆ. ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಸ್ಪರ್ಧೆಯಿಂದ ಫಲಿತಾಂಶ ಕೆರಳಿಸಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಹಿಂದುತ್ವ 'ಕೈ' ಬಿಡದ ಜನ: ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲು - Coastal Karnataka General Election Result