ಬೆಂಗಳೂರು: ಇ.ಡಿ ತನಿಖಾ ವರದಿ ಸೋರಿಕೆ ಮಾಡಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.
ವಿಧಾನಸೌಧಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜೊತೆ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಡಾ ಕೇಸ್ನಲ್ಲಿ ಲೋಕಾಯುಕ್ತ ತನಿಖೆ ಮಾಡುತ್ತಿದೆ. ಅವರು ಪಾರದರ್ಶಕವಾಗಿ ತನಿಖೆ ಮಾಡುತ್ತಿದ್ದಾರೆ. ಲೋಕಾಯುಕ್ತ ಕೋರ್ಟ್ಗೆ ಯಾವುದೇ ಮಧ್ಯಂತರ ವರದಿ ನೀಡಿಲ್ಲ. ತನಿಖೆ ಪ್ರಗತಿಯಲ್ಲಿದೆ. ಈ ವೇಳೆ ಇ.ಡಿ ಲೋಕಾಯುಕ್ತರಿಗೆ ಪತ್ರದ ಮೂಲಕ ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅವರು ಮಾಡಿದ ತನಿಖೆ ಬಗ್ಗೆ ಹೇಳಿದ್ದಾರೆ ಎಂದು ಹರಿಹಾಯ್ದರು.
ಯಾವುದೇ ತನಿಖೆ ಕಾನೂನಾತ್ಮಕವಾಗಿ ನೋಡುವುದಾದರೆ ಒಂದೇ ಪ್ರಕರಣದ ಬಗ್ಗೆ ಎರಡು ತನಿಖಾ ಏಜೆನ್ಸಿಗಳು ತನಿಖೆ ಮಾಡುವ ಹಾಗಿಲ್ಲ. ಇ.ಡಿ ಅವರು ಪತ್ರದಲ್ಲಿ ಕೆಲವೊಂದಕ್ಕೆ ತೀರ್ಪಿಗೆ ಬಂದಂತಿದೆ. ಲೋಕಾಯುಕ್ತದ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅಥವಾ ಅವರು ಲೋಕಾಯುಕ್ತಕ್ಕೆ ಈ ರೀತಿ ತನಿಖೆ ಮಾಡಿ ಎಂದು ಹೇಳಿದಂತಿದೆ. ಇದು ಕಾನೂನು ವಿರೋಧಿ ನಡೆಯಾಗಿದೆ. ರಾಜಕೀಯವಾಗಿ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಸರ್ಕಾರದ ಮೇಲೆ ಆಪಾದನೆ ಮಾಡಲು ಯಾವುದೇ ವಿಚಾರ ಇಲ್ಲ. ಸರ್ಕಾರ ಜನಪರ ಆಡಳಿತ ಕೊಡುತ್ತಿದೆ. ಅದಕ್ಕಾಗಿ ಪ್ರತಿಪಕ್ಷ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಿಬಿಐ, ಐಟಿ, ಇಡಿ ಕೇಂದ್ರದ ಕೈ ಗೊಂಬೆಗಳಾಗಿವೆ. ಎಲ್ಲೆಲ್ಲಿ ರಾಜ್ಯ ಬಿಜೆಪಿ ದುರ್ಬಲವಾಗಿದೆಯೋ ಅಲ್ಲಿ ಇಡಿ, ಸಿಬಿಐ, ಐಟಿಯನ್ನು ಛೂ ಬಿಡುತ್ತಾರೆ. ರಾಜ್ಯಪಾಲರ ಕಚೇರಿಯನ್ನೂ ದುರ್ಬಳಕೆ ಮಾಡುತ್ತಿದೆ. ಇಡಿ ಒಂದು ರಾಜಕೀಯ ಟೂಲ್ ಆಗಿದೆ. ಕಾನೂನು ಪ್ರಕಾರ ಇಡಿ ಈ ಮುಡಾ ಸಂಬಂಧ ಹೇಗೆ ಎಂಟ್ರಿ ಕೊಡುತ್ತೆ ಅನ್ನೋದು ಗೊತ್ತಿಲ್ಲ. ಲೋಕಾಯುಕ್ತ ಎಫ್ಐಆರ್ ಹಾಕಿದ ತಕ್ಷಣ ಇ.ಡಿ ಇಸಿಆರ್ ದಾಖಲು ಮಾಡುತ್ತೆ. ಲೋಕಾಯುಕ್ತ ಇ.ಡಿಯವರ ಸಹಾಯ ಕೇಳಿಲ್ಲ ಎಂದರು.
ನಿವೇಶನ ವಾಪಸ್ ಕೊಟ್ಟ ಹಿನ್ನೆಲೆ ಅವರಿಗೆ ಕೇಸೇ ಇಲ್ಲ. ಉದ್ದೇಶಪೂರ್ವಕವಾಗಿ ವರದಿ ಸೋರಿಕೆ ಮಾಡಲಾಗಿದೆ. ಆ ಮೂಲಕ ಲೋಕಾಯುಕ್ತದ ಮೇಲೆ ಪ್ರಭಾವ ಬೀರಲು ಮಾಡುತ್ತಿದ್ದಾರೆ. ನಾಳೆ ಹೈಕೋರ್ಟ್ನಲ್ಲಿ ವಿಚಾರಣೆ ಇದೆ. ದಿಲ್ಲಿಯಲ್ಲಿ ಇಡಿ ಈ ವರದಿ ಸೋರಿಕೆ ಮಾಡಿದ್ದಾರೆ. ಕೆಲ ಮಾಧ್ಯಮದವರನ್ನು ಕರೆದು ವರದಿ ಲೀಕ್ ಮಾಡಲಾಗಿದೆ. ಹೈಕೋರ್ಟ್ ವಿಚಾರಣೆ ಮೇಲೆ ಪರಿಣಾಮ ಬೀರಲು ಇದನ್ನು ಮಾಡಿದ್ದಾರೆ. ಇ.ಡಿ ರಾಜಿಯಾಗಿದ್ದು, ಬಿಜೆಪಿ ರಾಜಕೀಯ ಟೂಲ್ ಆಗಿದೆ ಎಂದು ಸಚಿವ ಖರ್ಗೆ ದೂರಿದರು.
ವರದಿ ಪ್ರಕಾರ ನಿವೇಶನ ಹಂಚಿಕೆ ವೇಳೆ ಸಿದ್ದರಾಮಯ್ಯ ವಿಪಕ್ಷ ನಾಯರಾಗಿದ್ದರು. ಆ ಸಂದರ್ಭ ನಿವೇಶನ ಹಂಚಿಕೆಯಾದ ವೇಳೆ ಬೊಮ್ಮಾಯಿ ಸಿಎಂ ಆಗಿದ್ದರು. ಇದೇ ಒಂದೇ ವರದಿ ಏಕೆ ಸೋರಿಕೆ ಆಗುತ್ತೆ?. 132 ಮನಿ ಲಾಂಡ್ರಿಂಗ್ ಕೇಸ್ ಹಾಕಲಾಗಿವೆ. ಆದರೆ, ದೋಷಿಯಾಗಿರುವುದು 1 ಮಾತ್ರ. 121 ಇಡಿ ದಾಳಿ ಮಾಡಲಾಗಿದ್ದು, ಅದರಲ್ಲಿ 115 ವಿಪಕ್ಷ ನಾಯಕರ ಮೇಲೆ ಆಗಿದೆ. 5906 ಪಿಎಂಎಲ್ಎದಲ್ಲಿ ಕೇವಲ 31 ಕೇಸ್ ಮಾತ್ರ ಕೋರ್ಟ್ನಲ್ಲಿ ವಿಚಾರಣೆಗೆ ಹೋಗಿವೆ. ಸಿದ್ದರಾಮಯ್ಯ ಕೇಸ್ ಮಾತ್ರ ಏಕೆ ಸೋರಿಕೆ ಆಯಿತು ಎಂದು ಅವರು ಪ್ರಶ್ನಿಸಿದರು.
ವಿಜಯೇಂದ್ರ ಅಫಿಡವಿಟ್ನಲ್ಲಿ ಮನಿ ಲಾಂಡ್ರಿಂಗ್ ಕೇಸ್ ಇದೆ ಎಂದು ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ವರದಿ ಏಕೆ ಹೊರಬಂದಿಲ್ಲ. ಹೇಮಂತ ಸೊರೇನ್ ಮೇಲೆ ಏಕೆ ವರದಿ ಸೋರಿಕೆ ಏಕೆ ಆಗಿಲ್ಲ?. ಇವರು ದಿಲ್ಲಿಗೆ ಹೋಗಿದ್ದು, ಭಿನ್ನಾಭಿಪ್ರಾಯ ಸರಿ ಪಡಿಸಲು ಹೋಗಿದ್ದು ಅಲ್ಲ. ಅವರು ಕೇಂದ್ರ ನಾಯಕರ ಕೈ ಕಾಲು ಬಿದ್ದು ಅಧಿವೇಶನ ಮುಂಚೆ ಈ ತರ ಮಾಡಿ ಎಂದು ಹೇಳಲು ಹೋಗಿರಬೇಕು. ಈ ವರದಿ ಸೋರಿಕೆ ರಾಜಕೀಯ ಪ್ರೇರಿತವಾಗಿದೆ. ಇದನ್ನು ನಾವು ರಾಜಕೀಯ ಹಾಗು ಕಾನೂನು ಪ್ರಕಾರ ಎದುರಿಸುತ್ತೇವೆ. ಈ ವರದಿ ಬಗ್ಗೆನೂ ತನಿಖೆ ಮಾಡಬೇಕು. ಈ ವರದಿಯನ್ನು ನಾವು ತಿರಸ್ಕರಿಸುತ್ತೇವೆ. ನಾಳೆ ನಡೆಯುವ ಹಾಸನ ಸಮಾವೇಶದಲ್ಲಿ ಜನರೇ ಬಿಜೆಪಿಗೆ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಇಡಿ ಈ ಪ್ರಕರಣ ಸಂಬಂಧ ಮೊದಲಿನಿಂದ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದೆ. ಈ ತನಿಖೆ ರಾಜಕೀಯ ಪ್ರೇರಿತವಾಗಿದೆ. ಇವರ ತನಿಖೆ ಸತ್ಯವನ್ನು ಹೊರಹಾಕಲು ಅಲ್ಲ. ನ್ಯಾಯಾಲಯದಲ್ಲಿ ನಾಳೆ ಹೈಕೋರ್ಟ್ ಪೀಠದ ಮುಂದೆ ವಿಚಾರಣೆಗೆ ಬರುತ್ತೆ. ನಡೆಯುತ್ತಿರುವ ತನಿಖೆ ಬಗ್ಗೆ ವರದಿ ನೀಡುವ ಅಧಿಕಾರ ಇ.ಡಿಗೆ ಇಲ್ಲ. ಸೋರಿಕೆ ಆಗಿದೆ ಇದು ತನಿಖೆಯ ಪಾವಿತ್ರ್ಯತೆಗೆ ಮಾಡಿದ ಧಕ್ಕೆಯಾಗಿದೆ. ನಿವೇಶನ ವಾಪಸ್ ಮಾಡಲಾಗಿದೆ. ಇಡಿಯವರಿಗೆ ತನಿಖೆ ಮಾಡುವ ಗ್ರೌಂಡೇ ಇಲ್ಲ ಎಂದರು.
ಇದನ್ನೂ ಓದಿ:ಇಡಿ ಲೋಕಾಯುಕ್ತಕ್ಕೆ ಪತ್ರ ಬರೆದಿರೋದು ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ