ಕಲಬುರಗಿ:ಜಮೀನು ಪೋಡಿಗೆ ಭೂಮಾಪನಾ ಇಲಾಖೆಯ ಡಿಡಿಎಲ್ಆರ್ ಮತ್ತು ಸರ್ವೇಯರ್ 1.5 ಲಕ್ಷ ರೂಪಾಯಿ ಲಂಚ ಹಣ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡಾಗಿ ಲೋಕಾಯುಕ್ತರ ಬೆಲೆಗೆ ಬಿದ್ದಿದ್ದಾರೆ. ಭೂಮಾಪನಾ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಡಿಡಿಎಲ್ಆರ್ ಪ್ರವೀಣ ಜಾಧವ ಮತ್ತು ಸರ್ವೆಯರ್ ಶರಣಗೌಡ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಮಾಪಕ ಇಲಾಖೆಯ ಸಿಬ್ಬಂದಿ ರೇವಣಸಿದ್ಧ ಮೂಲಗೆ ಎಂಬವರಿಗೆ ಚಿಕ್ಕಪುಟ್ಟ ವಿಚಾರಕ್ಕೂ ನಿಮ್ಮನ್ನು ಅಮಾನತು ಮಾಡುವುದಾಗಿ ಬೆದರಿಸಿ ಪ್ರತಿಯೊಂದು ಕಡತಕ್ಕೂ ಹಣ ಕೊಡುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದರಂತೆ. ಅದರಂತೆ, ಬ್ರಹ್ಮಪೂರ ಸರ್ವೆ ನಂ. 89/4ರ 12.7 ಎಕರೆ ಜಮೀನಿನಲ್ಲಿ 25 ಗುಂಟೆ ಜಮೀನನ್ನು ಪೋಡಿ ಮಾಡಿಕೊಡಲು ₹3.5 ಲಕ್ಷ ಬೇಡಿಕೆ ಇಟ್ಟಿದ್ದರಂತೆ. ಇದರಲ್ಲಿ ₹1.5 ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಕಲಬುರಗಿ ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಗೀತಾ ಬೆನಾಳ, ಇನ್ಸ್ಪೆಕ್ಟರ್ ರಾಜಶೇಖರ್, ಪ್ರದೀಪ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಇಬ್ಬರು ಟೆಕ್ಕಿಗಳ ಸಾವು ಪ್ರಕರಣ: ಬಿಬಿಎಂಪಿ ಕಸದ ಲಾರಿ ಚಾಲಕ ಅರೆಸ್ಟ್ - BBMP Lorry Driver Arrested