ಬೆಂಗಳೂರು: ಸರ್ಕಾರಿ ಆಸ್ತಿಗಳ ರಕ್ಷಣೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವ ಹಾಗೂ ಸಣ್ಣ ಉದ್ದಿಮೆಗಳಿಗೆ ಸರಳ ಆಡಳಿತ ನೀಡುವ ಸಲುವಾಗಿ ಕರ್ನಾಟಕ ಭೂ ಕಂದಾಯ ವಿಧೇಯಕಕ್ಕೆ ಅಗತ್ಯ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ತಂದಿದೆ.
ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಈ ವಿಧೇಯಕವನ್ನು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಮಂಡಿಸಿದ್ದರು. ಈ ಕಾನೂನುಗಳನ್ನು ಸರಳೀಕರಣಗೊಳಿಸಿ ಸರ್ಕಾರಿ ಆಸ್ತಿಗಳ ರಕ್ಷಣೆಗೆ ಮತ್ತಷ್ಟು ಬಲ ತುಂಬುವ ಹಾಗೂ ಸಣ್ಣ ಉದ್ದಿಮೆದಾರರಿಗೆ ಸರಳ ಆಡಳಿತ ನೀಡುವ ಸಲುವಾಗಿ ಈ ಕಾನೂನಿಗೆ ಪ್ರಮುಖ ನಾಲ್ಕು ತಿದ್ದುಪಡಿಗಳನ್ನು ತಂದಿದೆ.
ತಿದ್ದುಪಡಿಯಲ್ಲಿರುವ ಅನುಕೂಲವೇನು?ಯಾವುದೇ ಜಮೀನು ಖಾಸಗಿ ವ್ಯಕ್ತಿಗೆ ಸೇರಿಲ್ಲದಿದ್ದಲ್ಲಿ ಅದು ಸರ್ಕಾರಕ್ಕೆ ಸೇರಿದೆ ಎಂಬ ಸಾರಾಂಶವನ್ನು ಕರ್ನಾಟಕ ಭೂ ಕಂದಾಯ ಕಾನೂನಿನ ಕಲಂ 67 ಹೇಳುತ್ತದೆ. ಕೆಲವರು ತಮ್ಮ ಹೆಸರಿಗೆ ಸದರಿ ಜಮೀನುಗಳ ಖಾತೆ ಮಾಡಿಕೊಡಿ ಎಂದು ತಹಶೀಲ್ದಾರರಿಗೆ ಮನವಿ ಮಾಡುತ್ತಾರೆ. ಆದರೆ, ಅವರ ಬಳಿ ಜಮೀನಿನ ಮಾಲೀಕತ್ವ ನಿರೂಪಿಸುವ ಮೂಲ ದಾಖಲೆ ಅಥವಾ ಸಮರ್ಪಕ ದಾಖಲೆ ಇಲ್ಲದಿದ್ದರೆ ಅವರಿಗೆ ಜಮೀನಿನ ಖಾತೆ ಮಾಡಿಕೊಡಲಾಗುವುದಿಲ್ಲ.
ತಹಶೀಲ್ದಾರರು ಖಾತೆ ಮಾಡಿಕೊಡದಿದ್ದಲ್ಲಿ ಅರ್ಜಿದಾರರು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅಪೀಲು ಹೋಗುತ್ತಿದ್ದರು. ಆದರೆ, ಈ ಅಪೀಲನ್ನು ಉಪ ವಿಭಾಗಾಧಿಕಾರಿ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಯೇ ಆಲಿಸಬೇಕು ಎಂದು ಈ ಹಿಂದಿನ ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿತ್ತು. ಹೀಗಾಗಿ ಇಂತಹ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳೇ ನ್ಯಾಯ ತೀರ್ಮಾನ ಮಾಡುತ್ತಿದ್ದರು. ಆದರೆ, ಕೆಲವು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳೇ ಸಾರ್ವಜನಿಕ ಹಿತಾಸಕ್ತಿಯ ವಿರುದ್ಧ ಆದೇಶ ಮಾಡಿರುವ ಉದಾಹರಣೆಗಳಿವೆ. ಬೆಂಗಳೂರಿನಲ್ಲೇ ಇಂತಹ ಹಲವು ಪ್ರಕರಣಗಳು ನಡೆದಿವೆ.
ಖಾಸಗಿಯವರಿಗೆ ಮ್ಯುಟೇಷನ್ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿ, ಅವರ ಹೆಸರಿನಲ್ಲಿ ಖಾತೆಯೂ ಆಗಿರುವ ಸಾಕಷ್ಟು ಘಟನೆಗಳು ನಡೆದಿವೆ. ಇದನ್ನು ತಪ್ಪಿಸಲು ತಿದ್ದುಪಡಿ ತರಲಾಗಿದೆ. ಹಳೆಯ ಕಾನೂನಿನ ಪ್ರಕಾರ, ಜಿಲ್ಲಾಧಿಕಾರಿಗಳು ಆದೇಶ ಮಾಡಿದರೆ, ಪ್ರಕರಣದ ಮುಂದಿನ ಅಪೀಲು ನೇರವಾಗಿ ಸಿವಿಲ್ ನ್ಯಾಯಾಲಯಕ್ಕೆ ಹೋಗುತ್ತವೆ. ಪರಿಣಾಮ ಹೈಕೋರ್ಟ್‌ನಲ್ಲಿ ಸರ್ಕಾರ ಫಜೀತಿಗೆ ಸಿಲುಕಬೇಕಾದ ಪ್ರಸಂಗ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕಾನೂನು ಹೋರಾಟಕ್ಕೆ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶವೇ ಸಿಗದಿರುವ ಸಾಧ್ಯತೆಯೇ ಹೆಚ್ಚು. ಪರಿಣಾಮ ನಾವು ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸುವುದು ಕಷ್ಟವಾಗಬಹುದು. ಅದಕ್ಕಾಗಿಯೇ ಈಗ ಕಾನೂನಿಗೆ ತಿದ್ದುಪಡಿ ತಂದು ಮೊದಲ ಅಪೀಲನ್ನು ಆಲಿಸುವ ಅಧಿಕಾರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ.