ಬೆಳಗಾವಿ:ನಿನ್ನೆ ವಿಧಾನಪರಿಷತ್ನಲ್ಲಿ ನಡೆದ ಘಟನೆ ಸಂಬಂಧ ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿದರು. ಸದನದಲ್ಲಿ ಈ ವಿಚಾರ ಯಾರೂ ಖಂಡಿಸದೇ ಇರುವುದನ್ನು ನೆನೆದು ಗದ್ಗದಿತರಾದರು.
ಬಿಜೆಪಿ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಪ್ರಯೋಗದ ಹಿನ್ನೆಲೆ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, "ಡಾ.ಬಿ. ಆರ್. ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ನಾವು ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದೆವು. ಧರಣಿ ಮಾಡಿ ಮುಗಿದು ನಾವು ಕುಳಿತಿದ್ದೆವು. ನನ್ನ ಸೀಟ್ ಮೇಲೆ ಸುಮ್ಮನೆ ಕುಳಿತಿದ್ದೆ. ಆಗ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಎಡಿಕ್ಟ್ ಅಂತ ಸಿಟಿ ರವಿ ಅವರು ಅಂದರು. ತಾವು ಸಹ ಅಪಘಾತ ಮಾಡಿದ್ದೀರಿ, ತಾವೂ ಸಹ ಕೊಲೆಗಾರ ಆಗುತ್ತೀರಿ, ಅಂದೆ. ನನಗೆ ಬಳಿಕ ಆ ಶಬ್ದವನ್ನು ಸಿಟಿ ರವಿ ಒಮ್ಮೆ ಅಲ್ಲ, ಹತ್ತು ಬಾರಿ ಹೇಳಿದರು. ನನ್ನ ತೇಜೋವಧೆ ಮಾಡಿದರು. ಇದಕ್ಕೆಲ್ಲ ನಾನು ಹೆದರುವುದಿಲ್ಲ" ಎನ್ನುತ್ತಲೇ ಆ ಘಟನೆ ನೆನೆದು ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕರಾದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ (ETV Bharat) "ನಾನೂ ಕೂಡ ಒಬ್ಬ ತಾಯಿ, ಅಕ್ಕ, ಅತ್ತೆ. ನನ್ನ ನೋಡಿ ಸಾವಿರಾರು ಜನ ರಾಜಕೀಯಕ್ಕೆ ಬರಬೇಕು ಅಂತಿರುತ್ತಾರೆ. ಅಂಥವರಿಗೆಲ್ಲ ಇದು ದೊಡ್ಡ ನೋವು ತಂದಿದೆ" ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕಳವಳ ವ್ಯಕ್ತಪಡಿಸಿದರು.
"ರಾಜಕಾರಣದಲ್ಲಿ ರೋಷಾವೇಷವಾಗಿ ಭಾಷಣ ಮಾಡುತ್ತೇವೆ. ಜೀವನದಲ್ಲಿ ಒಂದು ಇರುವೆಗೂ ನಾನು ಕಾಟ ಕೊಟ್ಟಿಲ್ಲ. ನಾನು ನನ್ನ ಪಾಡಿಗೆ ರಾಜಕೀಯ ಮಾಡುತ್ತ ಕೈಲಾದಷ್ಟು ಜನರ ಸೇವೆ ಮಾಡಿಕೊಂಡು ಬಂದಿದ್ದೇವೆ. ರಾಜಕೀಯದಲ್ಲಿ ಇರಬೇಕು ಎಂದರೆ ಧೈರ್ಯವಾಗಿರಬೇಕು. ಪರಿಷತ್ ಅನ್ನು ಹಿರಿಯರ ಚಾವಡಿ, ಬುದ್ದಿವಂತರ ಕಟ್ಟೆ ಅಂತ ಕರೆಯುತ್ತಾರೆ. ಆದರೆ ವಿಧಾನ ಪರಿಷತ್ನಲ್ಲಿ ಅಂತಹ ಶಬ್ಧ ಪ್ರಯೋಗ ಆದರೂ ಎಲ್ಲರೂ ಧೃತರಾಷ್ಟ್ರ ಆಗಿದ್ದರು. ಅದನ್ನು ಯಾರೂ ಖಂಡಿಸಲಿಲ್ಲ, ಕೇಳಿದವರು ಪಕ್ಕದಲ್ಲಿ ಬಂದು ಸಾರಿ ಅಂದರು ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ನಮ್ಮ ಪಕ್ಷದ ಸದಸ್ಯರು ನನ್ನ ಬೆಂಬಲಕ್ಕೆ ನಿಂತರು" ಎಂದರು.
"ರಾಹುಲ್ ಗಾಂಧಿಯವರಿಗೆ ಅವರು ಡ್ರಗ್ ಎಡಿಕ್ಟ್ ಎಂದಿದ್ದರು. ಅದಕ್ಕೆ ನಾನು, ನೀವೂ ಕೂಡ ಕೊಲೆಗಾರ ಅನ್ನಬಹುದಾ ಅಂತಾ ಹೇಳಿದೆ. ಮಾಧ್ಯಮಗಳು ಎಲ್ಲವನ್ನೂ ತೋರಿಸಿವೆ. ಆದರೆ, ಸಿ.ಟಿ. ರವಿ ಅವರು ಸುಳ್ಳು ಹೇಳುತ್ತಿದ್ದಾರೆ. ನನ್ನ ಸೊಸೆ ನನಗೆ ಫೋನ್ ಮಾಡಿ, ನಿಮ್ಮ ಜೊತೆ ನಾವಿದ್ದೇವೆ ಅಂತಾ ಹೇಳಿದಳು. ನನ್ನ ಕ್ಷೇತ್ರದ ಜನ ಮತ್ತು ಪಕ್ಷದ ಕಾರ್ಯಕರ್ತರು ನನ್ನ ಹಿಂದೆ ಇದ್ದಾರೆ. ಈ ಕ್ಷಣಕ್ಕೆ ಇಷ್ಟೇ ನಾನು ಹೇಳುವುದು" ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ:ನನ್ನ ಜೀವಕ್ಕೆ ಅಪಾಯವಿದೆ, ಕೊಲೆಗೂ ಸಂಚು ನಡೆಸಲಾಗುತ್ತಿದೆ: ಸಿ.ಟಿ.ರವಿ ಆರೋಪ