ಬೆಳಗಾವಿ:''ಹಾಸನ ಅಶ್ಲೀಲ ವಿಡಿಯೋ ವೈರಲ್ ಬಗ್ಗೆ ಗೊತ್ತಿದ್ದರೂ ಸಹ ಬಿಜೆಪಿಯವರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇಡೀ ರಾಜ್ಯ, ದೇಶ, ವಿಶ್ವವೇ ತಲೆ ತಗ್ಗಿಸುವ ಈ ಘಟನೆಯ ಬಗ್ಗೆ ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟ ಪಡಿಸಬೇಕು'' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.
ತಮ್ಮ ಗೃಹ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ಇಡೀ ರಾಜ್ಯ ತಲೆ ತಗ್ಗಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಮುಂಚೆಯೇ ಹಾಸನದ ಬಿಜೆಪಿ ನಾಯಕ ದೇವರಾಜಗೌಡ ಅವರು, ಮೈತ್ರಿ ಮಾಡಿಕೊಳ್ಳುವುದು ಬೇಡ, ಅವರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ತಿಳಿಸಿದ್ದರು. ಇದೆಲ್ಲಾ ಬಿಜೆಪಿ ಅವರಿಗೆ ಮುಂಚೆಯೇ ಗೊತ್ತಿದ್ದರೂ ಕೂಡ ತಮ್ಮ ರಾಜಕೀಯ ಲಾಭಕ್ಕಾಗಿ, ಬೇಟಿ ಬಚಾವೊ- ಬೇಟಿ ಪಡಾವೊ, ನಾರಿ ಶಕ್ತಿ ನಾರಿ ಸನ್ಮಾನ್ ಎನ್ನುವ ಬಿಜೆಪಿ ನಾಯಕರು ಮೈತ್ರಿ ಮಾಡಿಕೊಂಡರು'' ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಮೈಸೂರಿಗೆ ಅಮಿತ್ ಶಾ ಅವರು ಬಂದ ವೇಳೆ ಹಾಸನದ ಮಾಜಿ ಶಾಸಕ ಪ್ರೀತಂಗೌಡ, ಎ.ಟಿ. ರಾಮಸ್ವಾಮಿ ಅವರು ಖುದ್ದಾಗಿ ಅವರನ್ನು ಭೇಟಿಯಾಗಿ ಈ ಬಗೆಗಿನ ಎಲ್ಲ ವಿಚಾರಗಳನ್ನು ತಿಳಿಸಿದ್ದಾರೆ. ಅಮಿತ್ ಶಾ ಅವರಿಗೂ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಎಲ್ಲ ಮುಂಚೆಯೇ ಗೊತ್ತಿತ್ತು. ಇಷ್ಟೆಲ್ಲಾ ಆದ್ರೂ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರು'' ಎಂದು ಸಚಿವೆ ಹೆಬ್ಬಾಳ್ಕರ್ ತೀವ್ರ ವಾಗ್ದಾಳಿ ನಡೆಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಅಸಮಾಧಾನ:''ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿಲ್ಲ ಎಂದಾದರೆ ಇಂಟರ್ ಪೋಲ್ ಸಹಾಯ ಪಡೆದು ಹೊರಗಿನಿಂದ ಸ್ವದೇಶಕ್ಕೆ ಕರೆಸಲಿ. ನಮಗೆ ವಿಷಯ ಗೊತ್ತಾದ ತಕ್ಷಣ ಎಸ್ಐಟಿ ರಚನೆ ಮಾಡಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದೇವೆ. ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ನಾವು ಹೊತ್ತುಕೊಂಡಿದ್ದೇವೆ. ಸಂಸದರೊಬ್ಬರು ಅಧಿಕಾರ ದಾಹ ತೋರಿಸಿ ನೂರಾರು ಮಹಿಳೆಯರ ವಿಡಿಯೋ ಮಾಡಿದ್ದಾರೆ. ಮಹಿಳೆಯರನ್ನು ಜೀವಂತವಾಗಿ ಕೊಲೆ ಮಾಡಿದ್ದಾರೆ. ಇಷ್ಟೆಲ್ಲಾ ನಡೆದ್ರೂ ಬಿಜೆಪಿಯವರು ಬಾಯಿಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಹೋರಾಟ ಮಾಡಿದವರಿಗೆ ಈ ನೂರಾರು ಮಹಿಳೆಯರ ನೋವಿನ ಕೂಗು ಏಕೆ ಕೇಳುತ್ತಿಲ್ಲ? ಏಕೆ ಮೌನವಹಿಸಿದ್ದಾರೆ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಇದನ್ನು ಖಂಡಿಸುತ್ತೇನೆ'' ಎಂದರು.