ಕರ್ನಾಟಕ

karnataka

ETV Bharat / state

ಧರ್ಮಸ್ಥಳದಲ್ಲಿ ನ.26ರಿಂದ ಲಕ್ಷದೀಪೋತ್ಸವ: ಪೂಜೆ, ಉತ್ಸವ, ಕಾರ್ಯಕ್ರಮಗಳ ವಿವರ - DHARMASTHALA LAKSHA DEEPOTSAVA

ಧರ್ಮಸ್ಥಳದಲ್ಲಿ ನ.26ರಿಂದ 30ರ ವರೆಗೆ ಲಕ್ಷದೀಪೋತ್ಸವ ನಡೆಯಲಿದೆ. ಡಿ.1ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಜರುಗಲಿದೆ.

dharmasthala
ಧರ್ಮಸ್ಥಳ (ETV Bharat)

By ETV Bharat Karnataka Team

Published : Nov 23, 2024, 6:44 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಕಾರ್ತಿಕ ಮಾಸದ ಮಂಗಳ ಬಹುಳ ಏಕಾದಶಿಯಿಂದ ಅಮಾವಾಸ್ಯೆಯವರೆಗಿನ ಮಂಗಳಪರ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನಡೆಯಲಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವು ನ.26ರಿಂದ 30ರ ವರೆಗೆ ಜರುಲಿದ್ದು, ಡಿ.1ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಇರಲಿದೆ.

5 ದಿನದ ಕಾರ್ಯಕ್ರಮಗಳ ವಿವರ ಹೀಗಿದೆ: ಲಲಿತಕಲಾ ಗೋಷ್ಠಿ -ನ. 28ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5-30 ರಿಂದ ನಾಗಸ್ವರ ವಾದನ, 7ರಿಂದ ಸಾತ್ವಿಕ ಸಂಗೀತ, 8ರಿಂದ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.

ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ:ನ.29ರಂದು ಸಂಜೆ 5ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಉದ್ಘಾಟಿಸುವರು. ಬೆಂಗಳೂರಿನ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಶೋಧಕ ಡಾ.ಜಿ.ಬಿ.ಹರೀಶ, ನಿವೃತ್ತ ಉಪನ್ಯಾಸಕ ಡಾ.ಜೋಸೆಫ್ ಎನ್.ಎಂ., ಶಿಕ್ಷಕ ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ಅವರಿಂದ ಉಪನ್ಯಾಸ ನಡೆಯಲಿದೆ. ರಾತ್ರಿ 8-30 ರಿಂದ ಭರತನಾಟ್ಯ ಕಾರ್ಯಕ್ರಮ ಇರಲಿದೆ.

ನ.30ರಂದು ಸಂಜೆ 5 ಗಂಟೆಯಿಂದ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನನೀ ಡಾ.ರಾ.ಗಣೇಶ ಉದ್ಘಾಟಿಸುವರು. ಲೇಖಕ, ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ. ಪ್ರಮೀಳಾ ಮಾಧವ, ಡಾ. ಬಿ.ವಿ.ವಸಂತ ಕುಮಾರ್ ಮೈಸೂರು, ಪ್ರೊ. ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ನಡೆಯಲಿದೆ. ಬಳಿಕ ರಾತ್ರಿ 8-30ರಿಂದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮವಿದೆ. ನಿತ್ಯ ಸಂಜೆ 6-30 ರಿಂದ ರಾತ್ರಿ 11ರ ವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ - ಸಂಗೀತ ಹಬ್ಬವೇ ನಡೆಯಲಿದೆ.

ಲಕ್ಷದೀಪೋತ್ಸವದ ಪ್ರಯುಕ್ತ ಪಾದಯಾತ್ರೆ:ನ.26ರಂದು ಮಂಗಳವಾರ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ವಿ.ಪ.ಶಾಸಕ ಕೆ.ಪ್ರತಾಪಸಿಂಹ ನಾಯಕ್ ಹಾಗೂ ಮಾಜಿ ವಿ.ಪ.ಶಾಸಕ ಹರೀಶ್ ಕುಮಾರ್ ನೇತೃತ್ವದಲ್ಲಿ 25,000ಕ್ಕೂ ಅಧಿಕ ಭಕ್ತರು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಪ್ರಾರ್ಥನೆ ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ:ನ.26ರಿಂದ ಡಿ.1ರವರೆಗೆ ಧರ್ಮಸ್ಥಳದ ಪ್ರೌಢಶಾಲಾ ವಠಾರದಲ್ಲಿ ಪ್ರತಿ ವರ್ಷದಂತೆ ರಾಜ್ಯಮಟ್ಟದ ವಸ್ತುಪ್ರದರ್ಶನ ನಡೆಯಲಿದೆ. ನ.26ರಂದು ಬೆಳಗ್ಗೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನದಲ್ಲಿ ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಮಳಿಗೆಗಳಿರಲಿವೆ.

ಲಕ್ಷದೀಪೋತ್ಸವ ಉತ್ಸವಗಳು:

ಮಂಜುನಾಥ ಸ್ವಾಮಿಗೆ ನ.26: ಹೊಸ ಕಟ್ಟೆ ಉತ್ಸವ

ನ.27: ಕೆರೆ ಕಟ್ಟೆ ಉತ್ಸವ

ನ.28: ಲಲಿತೋದ್ಯಾನ ಉತ್ಸವ

ನ.29: ಕಂಚಿಮಾರು ಕಟ್ಟೆ ಉತ್ಸವ

ನ.30: ಗೌರಿಮಾರು ಕಟ್ಟೆ ಉತ್ಸವ

ಡಿ.1: ಸಮವಸರಣ ಪೂಜೆ - ಸಂಜೆ 6-30ರಿಂದ ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಜಿನಗಾನೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೇಮಾವತಿ ವೀ.ಹೆಗ್ಗಡೆ, ಪ್ರೊ.ಎಸ್.ಪ್ರಭಾಕರ್, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ಸಹಿತ ಸಮಿತಿ ಸ್ವಾಗತ ಸಮಿತಿ ಪ್ರಮುಖರು ಉಪಸ್ಥಿತರಿರುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಚಂಪಾಷಷ್ಠಿ ಮಹಾರಥೋತ್ಸವ: ಪೂಜಾ ಸೇವೆ, ಉತ್ಸವಾದಿಗಳ ವಿವರ

ABOUT THE AUTHOR

...view details