ದಾವಣಗೆರೆ:ಮಳೆ ಇಲ್ಲದೆ ಬರಗಾಲದಿಂದ ಬೇಸತ್ತಿದ್ದ ರೈತರಿಗೆ ಕೊಂಚ ಮಟ್ಟಿಗೆ ಮಳೆರಾಯ ಕೃಪೆ ತೋರಿದ್ದಾನೆ. ಈ ಬಾರಿ ತಕ್ಕಮಟ್ಟಿಗೆ ಮಳೆ ರೈತರ ಕೈ ಹಿಡಿದಿದೆ. ಮಳೆ ಆಗಮನದಿಂದ ರೈತರು ಬಿತ್ತನೆ ಮಾಡಿದ್ದಾರೆ. ದುರಂತ ಎಂದರೆ, ರೈತರ ಬೆಳೆಗೆ ಲದ್ದಿ ಹುಳುಗಳು ಕಂಠಕವಾಗಿವೆ. ಮೆಕ್ಕೆಜೋಳ ಬೆಳೆಯ ಕಾಂಡವನ್ನು ಕೊರೆಯುತ್ತಿರುವ ಹುಳ್ಳುಗಳ ಕಾಟದಿಂದ ದಾವಣಗೆರೆ ಜಿಲ್ಲೆಯ ರೈತರು ಬೇಸತ್ತಿದ್ದಾರೆ. ಹುಳುಗಳಿಗೆ ಮುಕ್ತಿ ಕೊಡ್ಸಿ ನಮ್ಮ ಬೆಳೆ ರಕ್ಷಿಸಿ ಸ್ವಾಮಿ ಎಂಬ ರೈತರಿಂದ ಕೂಗು ಕೇಳಿಬರುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಶೇ.70ರಷ್ಟು ರೈತರು ಮೆಕ್ಕೆಜೋಳ ಬೆಳೆಯನ್ನೇ ಅವಲಂಬಿಸಿದ್ದಾರೆ. ಬರಗಾಲದಿಂದ ಮುಕ್ತಿ ಪಡೆದು ತಕ್ಕ ಮಟ್ಟಿಗೆ ಸುರಿದ ಮಳೆಗೆ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮೊಣಕಾಲಷ್ಟು ಮೆಕ್ಕೆಜೋಳ ಸಸಿಗಳು ಬೆಳೆದು ನಿಂತಿವೆ. ಆದ್ರೆ, ಮೆಕ್ಕೆಜೋಳ ಬೆಳೆಯುವ ಮುನ್ನವೇ ಲದ್ದಿ ಹುಳುಗಳು ಇಡೀ ಸಸಿಯ ಕಾಂಡವನ್ನು ಕೊರೆಯುತ್ತಿದ್ದು, ಇಡೀ ಬೆಳೆ ಸರ್ವನಾಶ ಮಾಡುತ್ತಿವೆ.
ದಾವಣಗೆರೆ ತಾಲೂಕಿನ ಆನಗೋಡು ಹೋಬಳಿ, ಮಾಯಕೊಂಡ ಹೋಬಳಿಗಳಲ್ಲಿ ಸಾವಿರಾರು ಎಕರೆ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುಗಳು ಕಾಟಕೊಡುತ್ತಿವೆ. ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಭೂಮಿ ಹದ ಮಾಡಿಕೊಂಡು ರೈತರು ಮೆಕ್ಕೆಜೋಳ ಬೆಳೆಯನ್ನು ಬೆಳೆದಿದ್ದರು. ಲದ್ದಿ ಹುಳುಗಳ ಕಾಟದಿಂದ ರೈತರು ಚಿಂತೆಗೀಡಾಗಿದ್ದಾರೆ. ರೈತರು ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ದೂರವಾಣಿ ಕರೆಯಲ್ಲೇ ಕೃಷಿ ಅಧಿಕಾರಿಗಳು ಔಷಧಿ ಸಿಂಗಡಿಸಿ ಎಂದು ಸಲಹೆ ಕೊಡ್ತಿದ್ದಾರೆ ವಿನಾಃ ಜಮೀನಿಗೆ ಬಂದು ಪರಿಶೀಲನೆ ಮಾಡುತ್ತಿಲ್ಲ ಎಂದು ರೈತರು ಅಳಲನ್ನು ತೋಡಿಕೊಂಡರು.