ಬೆಂಗಳೂರು: ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ, ದುರದೃಷ್ಟವಶಾತ್ ಎಲ್ಲ ಸಂಸ್ಥೆಗಳ ಉದ್ದೇಶ ಒಂದೇ ಆಗಿದ್ದರೂ ಅವುಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ನಿರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲ ಎಂದು ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ ವಿಷಾದ ವ್ಯಕ್ತಪಡಿಸಿದರು.
ಬೆಂಗಳೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಶುಕ್ರವಾರ ಶಿಕ್ಷಾಲೋಕಮ್ ಆಶ್ರಯದಲ್ಲಿ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಗಿ ಗ್ರಾಮೀಣ ವಲಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇದೆ. ಇದು ಶಿಕ್ಷಣ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರೇ ಶಿಕ್ಷಣದ ನಾಯಕರು. ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಿದರೆ ಶಿಕ್ಷಣವೂ ಸುಧಾರಣೆಯಾಗುತ್ತದೆ ಎಂದು ಯದುವೀರ್ ಅಭಿಪ್ರಾಯಪಟ್ಟರು.
ಶಿಕ್ಷಾಲೋಕಮ್‌ನ ಸ್ಥಾಪಕ ಹಾಗೂ ಇನ್‌ಫೋಸಿಸ್‌ನ ಸಹಸ್ಥಾಪಕ ಎಸ್.ಡಿ. ಶಿಬುಲಾಲ್ ಮಾತನಾಡಿ, ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಗುಣಮಟ್ಟದ ಶಿಕ್ಷಣ ಅವರಿಗೆ ದೊರೆಯಲು ದೇಶದ ಸಾರ್ವಜನಿಕ ಶಾಲೆಗಳು ಸುಧಾರಣೆಯಾಗಬೇಕು. ಶಿಕ್ಷಣ ಕ್ಷೇತ್ರದ ನಾಯಕರು ಸುಧಾರಣೆ ಪ್ರಕ್ರಿಯೆಯ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಬೇಕು. ಅದಕ್ಕಾಗಿ ಅವರಿಗೆ ನಿರಂತರವಾದ ಬೆಂಬಲ ಹಾಗೂ ಸಂಪನ್ಮೂಲಗಳ ಅಗತ್ಯವಿದೆ. ಆದರೆ, ಈ ಕನಸನ್ನು ಸಾಧಿಸಲು, ಕಲಿಕಾ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ತೊಡಗಿಕೊಂಡಿರುವ ಎಲ್ಲರಿಂದಲೂ ಸಂಘಟಿತ ಕ್ರಿಯೆಯ ಅಗತ್ಯವಿದೆ. ಶಿಕ್ಷಾಲೋಕಮ್ ಪ್ರಸ್ತುತ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿದ್ದು, ದೇಶದಾದ್ಯಂತ ಒಂದು ದಶಲಕ್ಷಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ 5,70,000ಕ್ಕಿಂತ ಹೆಚ್ಚಿನ ಶಿಕ್ಷಣ ನಾಯಕರು ಸುಧಾರಣೆಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.