ಉತ್ತರ ಕನ್ನಡ: ಜಿಲ್ಲೆಯ ಕುಮಟಾ, ಹೊನ್ನಾವರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಪ್ರಿಲ್-ಮೇ ತಿಂಗಳು ಬಂತೆಂದರೆ ಸಾಕು ದಾರಿಯುದ್ದಕ್ಕೂ ದ್ರಾಕ್ಷಿ ಮಾರಾಟ ಮಾಡಿದಂತೆ ಈರುಳ್ಳಿ ಮಾರಾಟ ನಡೆಯುತ್ತದೆ. ಕುಮಟಾದಲ್ಲಿ ಬೆಳೆಯುವ ಸಿಹಿ ಈರುಳ್ಳಿಗೆ ಬಹುಬೇಡಿಕೆ ಇರುವುದರಿಂದ ಪ್ರತೀ ವರ್ಷ ರಾಜ್ಯ, ಹೊರರಾಜ್ಯದ ಜನರು ಖರೀದಿ ಮಾಡುತ್ತಾರೆ. ಆದರೆ ಈ ಬಾರಿ ರೋಗಬಾಧೆಯಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಈರುಳ್ಳಿ ಇಲ್ಲ.
ಮಾರುಕಟ್ಟೆಗೆ ಬಂದ ಅಲ್ಪಸ್ವಲ್ಪ ಈರುಳ್ಳಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಅಪರೂಪದ ಈರುಳ್ಳಿಗೆ ಬಹು ಬೇಡಿಕೆ ಸೃಷ್ಟಿಯಾಗಿದೆ. ಕುಮಟಾ ತಾಲೂಕಿನ ಅಳ್ವೇಕೋಡಿ, ವನ್ನಳ್ಳಿ, ಗೋಕರ್ಣ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಹೇರಳವಾಗಿ ಬೆಳೆಯುತ್ತಿದ್ದ ಸಿಹಿ ಈರುಳ್ಳಿ ಪ್ರಮಾಣ ಇದೀಗ ಗಣನೀಯ ಇಳಿಕೆಯಾಗಿದೆ. ಹಾವುಸುಳಿ ರೋಗದಿಂದಾಗಿ ಬೆಳೆಯನ್ನು ಆರಂಭದಲ್ಲಿಯೇ ಉಳಿಸಿಕ್ಕೊಳ್ಳಲು ಸಾಧ್ಯವಾಗದೇ ರೈತರು ತತ್ತರಿಸುವಂತಾಗಿದೆ. ಗೋವಾ, ಮಹಾರಾಷ್ಟ್ರ, ಕೇರಳ ಭಾಗಕ್ಕೆ ಲಾರಿಗಟ್ಟಲೆ ಈರುಳ್ಳಿ ರಪ್ತು ಮಾಡುತ್ತಿದ್ದ ರೈತರು ಇದೀಗ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗದಷ್ಟು ಬೆಳೆ ಕೈಕೊಟ್ಟಿದೆ.
ಸದ್ಯ ಅಳ್ವೇಕೋಡಿ ಭಾಗದಲ್ಲಿ ಮೂರು-ನಾಲ್ಕು ಅಂಗಡಿಗಳ ಮೂಲಕ ಮಾತ್ರ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಮಾರುಕಟ್ಟೆಗೆ ಬಾರದ ಕಾರಣ ಸಾಮಾನ್ಯ ಈರುಳ್ಳಿಗಿಂತಲೂ ಎರಡು ಮೂರು ಪಟ್ಟು ದರ ಹೆಚ್ಚಳವಾಗಿದೆ. ಸಣ್ಣ ಗಾತ್ರದ ಈರುಳ್ಳಿಗಳನ್ನು ಪ್ರತೀ ಕೆ.ಜಿಗೆ 60-70 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೊಡ್ಡ ಪ್ರಮಾಣದ ಈರುಳಿ ಪ್ರತೀ ಕೆ.ಜಿಗೆ 80-120 ರೂವರೆಗೂ ಮಾರಾಟ ಮಾಡಲಾಗುತ್ತಿದೆ. ಅಪರೂಪದ ಸಿಹಿ ಈರುಳ್ಳಿ ಎಲ್ಲಿಯೂ ಸಿಗದ ಕಾರಣ ಕೆಲವರು ದರ ಹೆಚ್ಚಾದರೂ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಈ ಹಿಂದೆ 20-40 ಕ್ವಿಂಟಾಲ್ ಈರುಳ್ಳಿ ಬೆಳೆಯುವವರು ರೋಗದಿಂದಾಗಿ 3-4 ಕ್ವಿಂಟಾಲ್ ಬೆಳೆಯುತ್ತಿದ್ದಾರೆ. ಕೆಲವು ರೈತರು ಈರುಳ್ಳಿ ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಸ್ಥ ಮಂಜುನಾಥ ಪಟಗಾರ.