ಮೈಸೂರು: ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ರೀತಿ ತಂತ್ರಜ್ಞಾನ ಬಳಸಿ ನಕಲಿ ಫೋಟೋ ರಚಿಸಿ ವೈರಲ್ ಮಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ನಗರದ ಲಕ್ಷ್ಮೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ತಮ್ಮ ದೂರಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ನಾನು ಎಂದಾದರೂ ಧರ್ಮದ ಬಗ್ಗೆ ಮಾತನಾಡಿದ್ದೀನಾ?. ಇವರುಗಳು ಧರ್ಮ-ಧರ್ಮದ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೇ ಅವರ ಕೆಲಸವಾಗಿಬಿಟ್ಟಿದೆ. ಪ್ರಶಾಂತ್ ಸಂಬರಗಿ ಯಾರು ಅಂತಾನೇ ಗೊತ್ತಿಲ್ಲ. ಎಐ ತಂತ್ರಜ್ಞಾನ ಬಳಸಿ ನನ್ನ ನಕಲಿ ಫೋಟೋ ರಚಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ, ಪೊಲೀಸ್ ದೂರು ನೀಡಿ ಎಫ್.ಐ.ಆರ್ ದಾಖಲು ಮಾಡಿಸಿದ್ದೇನೆ ಎಂದು ಬಹುಭಾಷಾ ನಟ ತಿಳಿಸಿದರು.
ಕುಂಭಮೇಳ ಒಂದು ಪುಣ್ಯ ಸ್ಥಳ :ಮಹಾ ಕುಂಭಮೇಳ ಹಿಂದು ಧರ್ಮದವರಿಗೆ ಹಾಗೂ ದೇವರನ್ನು ನಂಬುವವರಿಗೆ ಒಂದು ಪುಣ್ಯ ಸ್ಥಳ. ಆದ್ರೆ ನನ್ನ ನಕಲಿ ಫೋಟೋ ವೈರಲ್ ಮಾಡುತ್ತಿದ್ದಾರೆ. ಅಂಥ ಪುಣ್ಯದ ಕೆಲಸದಲ್ಲಿ ರಾಜಕಾರಣ ನಡೆಯುತ್ತಿದೆ. ಇಂತಹವರು ಮೊದಲಿನಿಂದಲೂ ಪ್ರಕಾಶ್ ರಾಜ್ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬಂದಿದ್ದಾರೆ. ಪ್ರಶಾಂತ್ ಸಂಬರಗಿ ಪ್ರಖ್ಯಾತರೋ, ಕುಖ್ಯಾತರೋ ಎಂಬುದು ನನಗೆ ಗೊತ್ತಿಲ್ಲ. ಆದ್ರೆ ನನ್ನ ವಿರುದ್ಧ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಭ್ಯಾಸವಾಗಿ ಬಿಟ್ಟಿದೆ. ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ! ದ್ವೇಷ ಹರಡಿಸುತ್ತಿದ್ದಾರೆ. ಇವರು ನಿಜವಾಗಿಯೂ ಧರ್ಮವನ್ನು ಅನುಸರಿಸುವವರಲ್ಲ ಎಂದರು.
ಸುಳ್ಳು ಕೇಸ್ ವಿರುದ್ಧ ಗೆದ್ದಿದ್ದೇನೆ : ಜನರ ನಂಬಿಕೆಗೆ ಅಘಾತವಾಗುತ್ತಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ ಕೂಡಾ. ಇದೀಗ ಪ್ರಶಾಂತ್ ಸಂಬರಗಿ ವಿರುದ್ಧ ದೂರು ನೀಡಿ ಎಫ್.ಐ.ಆರ್ ಮಾಡಿಸಿದ್ದೇನೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಸತ್ಯಾನುಸತ್ಯತೆ ಎಲ್ಲರಿಗೂ ತಿಳಿಯಬೇಕು. ಫೇಕ್ ನ್ಯೂಸ್ ಸಮಾಜವನ್ನು ಹಾಳು ಮಾಡುತ್ತಿದೆ. ಸುಳ್ಳು ಸುದ್ದಿ ಹರಡುವವರಿಗೆ ಇದೊಂದು ಪಾಠ ಆಗಬೇಕು ಎಂದು ಹೇಳಿದರು.