ಹಾಸನ:ಈ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಆಗಿದೆ. ವರ್ಷದಲ್ಲಿ ಸರ್ಕಾರದ ಕೊಡುಗೆ ಏನು ? ಶಿಕ್ಷಣ ಇಲಾಖೆಯಲ್ಲಿ ಗೊಂದಲ ಎಬ್ಬಿಸಲಾಗಿದೆ. ಸಚಿವರೇ ದಮ್ಕಿ ಹಾಕ್ತಾರೆ ಎನ್ನುವ ಮಾತಿದೆ. ಯಾರೂ ಕೂಡ ಹೆದರಬೇಕಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಹಾಸನದಲ್ಲಿ ಶಾಸಕ ಎ.ಮಂಜು, ಸ್ವರೂಪ್ ಪ್ರಕಾಶ್ ಹಾಗೂ ಅಭ್ಯರ್ಥಿ ವಿವೇಕಾನಂದ ಜೊತೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಹೊಸ ಪದವಿ, ಹೈಸ್ಕೂಲ್, ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರು. ಶಾಲಾ ಶಿಕ್ಣಕರು, ಪದವಿ ಉಪನ್ಯಾಸಕರು ಹೆಚ್ಚು ನೇಮಕ ಆಗಿದ್ದು ಕೂಡ ಕುಮಾರಸ್ವಾಮಿ ಆಡಳಿತದಲ್ಲಿ ಎಂದು ರೇವಣ್ಣ ಹೇಳಿದರು.
ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸೇರಿ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದ್ದರು. ನಾನು ಯಾವ ಸಚಿವರ ಹೆಸರನ್ನು ಹೇಳೋದಿಲ್ಲ. ನಮ್ಮಲ್ಲೇ ಇದ್ದವರು ಹೋಗಿದ್ದಾರೆ. ಅವರು ಆಡಳಿತ ಪಕ್ಷ ಸೇರಿ ವರ್ಷ ಆಯ್ತಲ್ಲ. ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರಿಗೆ ಕೊಡುಗೆ ಏನಿದೆ ಎಂದು ವಾಗ್ದಾಳಿ ನಡೆಸಿದರು.
ನನಗೆ ದೇವರ ಆಶೀರ್ವಾದ ಇದೆ. ಹಾಸನ ಜಿಲ್ಲೆಯ ಜನರು ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ನಾನು ಜಿಲ್ಲೆಯ ಜನತೆಗೆ ಋಣಿಯಾಗಿ ಇದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ, ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲುವು - ಸೋಲು ಸಹಜ. ನಮ್ಮ ತಂದೆ ದೇವೇಗೌಡರು ರಾಜಕೀಯವಾಗಿ ನೆಲೆ ಊರಲು ಈ ಜಿಲ್ಲೆಯೇ ಕಾರಣ. ಈ ಹಿಂದೆ ಇದ್ದವರು ಗೆಲ್ಲಿಸಿದ ಬಳಿಕ ತಿರುಗಿ ನೋಡ್ತಾ ಇರಲಿಲ್ಲ. ಈಗ ನಮ್ಮ ಅಭ್ಯರ್ಥಿ, ತಮ್ಮ ಸಂಬಳ ಸೇರಿದಂತೆ ಸಂಪೂರ್ಣ ಅನುದಾನ ಶಿಕ್ಷಕರಿಗೆ ಮೀಸಲಿಡುವೆ ಎಂದಿದ್ದು, ಹೀಗೆ ಘೋಷಣೆ ಮಾಡಿದ ವ್ಯಕ್ತಿ ಹಿಂದೆ ಯಾರೂ ಇರಲಿಲ್ಲ ಎಂದು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.