ಕರ್ನಾಟಕ

karnataka

ETV Bharat / state

ಪೊಲೀಸ್​ ಭದ್ರತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವ; ಡಿ.7ರಂದು ಮಹಾರಥೋತ್ಸವ - KUKKE JATRE 2024

ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಭರದಿಂದ ಸಾಗಿದ್ದು, ಡಿ.7ರಂದು ಮಹಾರಥೋತ್ಸವ ನಡೆಯಲಿದೆ.

KUKKE JATRE 2024
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (ETV Bharat)

By ETV Bharat Karnataka Team

Published : Nov 30, 2024, 11:20 AM IST

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಭರದಿಂದ ಸಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಧ್ವಜಾರೋಹಣ (ಕೊಡಿ ಏರುವುದು) ಮೂಲಕ ಜಾತ್ರೆ ಆರಂಭವಾದರೆ, ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೋತ್ಸವ ಪ್ರಾರಂಭಗೊಳ್ಳುವುದು ಇಲ್ಲಿನ ವಿಶೇಷತೆ.

ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಅವಳಿ ಕೊಪ್ಪರಿಗೆಗಳನ್ನು ಭಕ್ತಾದಿಗಳ ಸಮ್ಮುಖದಲ್ಲಿ ಏರಿಸಲಾಯಿತು. ಪೂರ್ವಶಿಷ್ಯ ಸಂಪ್ರದಾಯದಂತೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಅಂದಿನ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದೇಗುಲದ ಉತ್ಸವಗಳಿಗೆ ಚಾಲನೆ ನೀಡಿದರು.

ಎಸ್​ಪಿ ಯತೀಶ್ ಎನ್ ಅವರಿಂದ ಮಾಹಿತಿ (ETV Bharat)

ಪೊಲೀಸ್ ಇಲಾಖೆಯಿಂದ ಭದ್ರತೆ: ಚಂಪಾಷಷ್ಠಿ ಉತ್ಸವಕ್ಕೆ ಪೊಲೀಸ್ ಇಲಾಖೆಯು ಪೂರ್ಣ ಪ್ರಮಾಣದ ಭದ್ರತಾ ವ್ಯವಸ್ಥೆ ಮಾಡಲಿದೆ ಎಂದು ಎಸ್​ಪಿ ಯತೀಶ್ ಎನ್. ತಿಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಮಾಹಿತಿ ನೀಡಿದರು.

ಚಂಪಾಷಷ್ಠಿ ಮಹೋತ್ಸವದ ಲಕ್ಷದೀಪೋತ್ಸವ ಹಾಗೂ ರಥೋತ್ಸವ ಸಂದರ್ಭದಲ್ಲಿ ಎಲ್ಲ ಭಕ್ತರಿಗೆ ಅನುಕೂಲ ಆಗುವ ರೀತಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ದೇವರ ದರ್ಶನಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು. ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇತರೆ ಭದ್ರತೆ ನಿಯೋಜಿಸಲಾಗಿದೆ ಎಂದರು.

ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಹಿನ್ನೆಲೆ ಪಾರ್ಕಿಂಗ್ ಮತ್ತಿತರ ವಿಚಾರದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಎಸ್​ಪಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಠಾಣೆಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಶೀಘ್ರ ಉದ್ಘಾಟನೆಗೊಳ್ಳಲಿರುವ ಸುಬ್ರಹ್ಮಣ್ಯದ ಹೊಸ ಪೊಲೀಸ್ ಠಾಣೆಯ ಕಟ್ಟಡವನ್ನು ವೀಕ್ಷಿಸಿದರು.

ಡಿ. 7ಕ್ಕೆ ಚಂಪಾಷಷ್ಠಿ, ಮಹಾರಥೋತ್ಸವ: ಶನಿವಾರ (ನ.30ರಂದು) ಲಕ್ಷದೀಪೋತ್ಸವ ನಡೆಯಲಿದೆ. ಡಿ. 1ರಂದು ಶೇಷವಾಹನೋತ್ಸವ, ಡಿ. 2ರಂದು ಅಶ್ವವಾಹನೋತ್ಸವ, ಡಿ. 3ರಂದು ಮಯೂರ ವಾಹನೋತ್ಸವ ನಡೆಯಲಿದ್ದು, ಡಿ. 4ರಂದು ಶೇಷ ವಾಹನೋತ್ಸವ, ಡಿ. 5ರಂದು ಚೌತಿ ಹೂವಿನ ತೇರಿನ ಉತ್ಸವ, ಡಿ.6ರಂದು ಮಾರ್ಗಶಿರ ಶುದ್ಧ ಪಂಚಮಿ ತೈಲಾಭ್ಯಂಜನ ದಿನ, ಅಂದೇ ರಾತ್ರಿ ಪಂಚಮಿ ರಥೋತ್ಸವ ನೆರವೇರಲಿದೆ. ಡಿ. 7ರಂದು ಮಾರ್ಗಶಿರ ಶುದ್ಧ ಷಷ್ಠಿ ಬೆಳಗ್ಗೆ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಡಿ. 8ರಂದು ಅವಭ್ರತೋತ್ಸವ ಮತ್ತು ನೌಕವಿಹಾರ, ಡಿ. 12ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೋತ್ಸವ ಸಮಾಪನಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಚಂಪಾಷಷ್ಠಿ ಮಹಾರಥೋತ್ಸವ: ಪೂಜಾ ಸೇವೆ, ಉತ್ಸವಾದಿಗಳ ವಿವರ

ABOUT THE AUTHOR

...view details