ಕರ್ನಾಟಕ

karnataka

ETV Bharat / state

5ನೇ ದಿನವೂ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ; ಹಲವೆಡೆ ರಸ್ತೆ ಸಂಚಾರ ಬಂದ್ - Kukke Subramanya - KUKKE SUBRAMANYA

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಸ್ನಾನಘಟ್ಟ 5ನೇ ದಿನವೂ ಮುಳುಗಡೆಯಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಸ್ನಾನ ಘಟ್ಟ ಮುಳುಗಡೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಸ್ನಾನಘಟ್ಟ ಮುಳುಗಡೆ (ETV Bharat)

By ETV Bharat Karnataka Team

Published : Jul 19, 2024, 11:42 AM IST

Updated : Jul 19, 2024, 12:46 PM IST

ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ (ETV Bharat)

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ಶಿರಾಡಿ ಘಾಟ್ ಪ್ರದೇಶ ಮತ್ತು ಕುಮಾರ ಪರ್ವತ ಶ್ರೇಣಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಇಲ್ಲಿನ ಸ್ನಾನಘಟ್ಟ ಐದನೇ ದಿನವೂ ಮುಳುಗಡೆಯಾಗಿಯೇ ಇದೆ.

ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಸುಬ್ರಹ್ಮಣ್ಯ-ಪಂಜ ರಸ್ತೆಗೆ ನೆರೆ ನೀರು ಬಂದಿದೆ. ಸ್ಥಳದಲ್ಲಿ ಪೊಲೀಸ್​​​​, ಗೃಹರಕ್ಷಕ ದಳ, ದೇಗುಲದ ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾತ್ರಾರ್ಥಿಗಳು ನದಿತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ತೀರ್ಥಸ್ನಾನ ನೆರವೇರಿಸಲು ಭಕ್ತರಿಗೆ ತೊಂದರೆಯಾಗಿದ್ದು, ನದಿ ನೀರನ್ನು ಡ್ರಮ್‌ಗಳ ಮೂಲಕ ಸಂಗ್ರಹಿಸಿ ಭಕ್ತರಿಗೆ ತೀರ್ಥಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮೈದುಂಬಿ ಹರಿಯುತ್ತಿರುವ ನದಿಗಳು (ETV Bharat)

ಶಾಲಾ-ಕಾಲೇಜುಗಳಿಗೆ ರಜೆ:ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಂದೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಹಾಗು ಕಡಬ ತಾಲೂಕುಗಳ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಜೆ ನೀಡಿರುವ ಈ ತಾಲೂಕುಗಳಲ್ಲಿ ಸಂಬಂಧಪಟ್ಟ ವಿದ್ಯಾಸಂಸ್ಥೆಗಳು ಅವಕಾಶವಿದ್ದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅನ್​ಲೈನ್ ತರಗತಿಯನ್ನು ನಡೆಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ದುರ್ಬಲ, ಶಿಥಿಲ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ-ಪ್ರವಚನಗಳಿಗೆ ಬಳಸಬಾರದು. ಶಾಲಾ-ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸುವಂತೆ ಮತ್ತು ನೀರಿರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಹಾಗೂ ವಿದ್ಯುತ್ ಕಂಬ, ತಂತಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವಂತೆಯೂ ಆದೇಶ ನೀಡಲಾಗಿದೆ.

ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ- 1077/2442590 ದೂರವಾಣಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಬಂದ್:ರಾಷ್ಟ್ರೀಯ ಹೆದ್ದಾರಿ-48(75)ರ ಬೆಂಗಳೂರು-ಮಂಗಳೂರು ರಸ್ತೆಯ ಸಕಲೇಶಪುರದ ದೊಡ್ಡತಪ್ಪಲು ಗ್ರಾಮದ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗಿದೆ. ಈ ರಸ್ತೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜು.18ರಿಂದ ಮುಂದಿನ ಆದೇಶದವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು (ತುರ್ತು ಪರಿಸ್ಥಿತಿ ವಾಹನ ಹೊರತುಪಡಿಸಿ) ನಿರ್ಬಂಧಿಸಲಾಗಿದೆ.

ಜಿಲ್ಲೆಯ ಮುಖಾಂತರ ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು, ಬದಲಿ ರಸ್ತೆಯಾದ ಹಾಸನ-ಬೇಲೂರು-ಮೂಡಿಗೆರೆ ಚಾರ್ಮಾಡಿ ಘಾಟ್​ ಮಾರ್ಗ ಬಳಸಬಹುದು.

ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಎಂಬಲ್ಲಿ ಭೂಕುಸಿತ ಉಂಟಾಗುವ ಸಂಭವವಿದೆ. ಹೀಗಾಗಿ ಜು.18ರಿಂದ 22ರವರೆಗೆ, ಪ್ರತಿದಿನ ರಾತ್ರಿ 8 ಗಂಟೆಯಿಂದ, ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಈ ಮಾರ್ಗವಾಗಿ ಸಾಗುವ ಎಲ್ಲಾ ವಾಹನಗಳ ಸಂಚಾರವನ್ನು (ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿ ಸಂಚರಿಸುವ ವಾಹನಗಳನ್ನು ಹೊರತುಪಡಿಸಿ) ನಿರ್ಬಂಧಿಸಲಾಗಿದೆ.

ಜಿಲ್ಲೆಯ ಮುಖಾಂತರ ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು, ಬದಲಿ ಮಾರ್ಗವಾಗಿ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಮಾರ್ಗ ಬಳಸಬಹುದು.

ಇದನ್ನೂ ಓದಿ:ಹಾವೇರಿ: ನಿರಂತರ ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು, ಮೂವರಿಗೆ ಗಾಯ - Haveri House Collapse

Last Updated : Jul 19, 2024, 12:46 PM IST

ABOUT THE AUTHOR

...view details