ಬೆಳಗಾವಿ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಅಲ್ಲ ಎಂದು ಹೇಳಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದು, ನಮ್ಮವರು ಎನ್ನುವ ಕಾರಣಕ್ಕೆ ಮೀಸಲಾತಿ ಹೋರಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಮಾಧ್ಯಮದವರ ಜತೆ ಮಾತನಾಡಿದ ಶ್ರೀಗಳು, ಲಕ್ಷ್ಮೀ ಹೆಬ್ಬಾಳ್ಕರ್ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರು ನಮ್ಮವರೇ ಎಂದು ನಾವು ಒಪ್ಪಿಕೊಂಡಿದ್ದೇವೆ. ಯಾರೋ ಒಬ್ಬರು ಏನೇನೋ ಮಾತಾಡ್ತಾರೆ ಅಂತ ನಾನು ಪ್ರತಿಕ್ರಿಯೆ ಕೊಡೋದಿಲ್ಲ. ಈ ಬಗ್ಗೆ ಬೆಳಗಾವಿ ಜಿಲ್ಲಾ ಮುಖಂಡರಿಂದಲೂ ಸ್ಪಷ್ಟನೆ ನೀಡಲಾಗುವುದು. ನಮ್ಮ ಮೀಸಲಾತಿ ಹೋರಾಟದಲ್ಲಿ ಅನೇಕರು ಗುರುತಿಸಿಕೊಂಡಿದ್ದರು. ನಮ್ಮವರು ಎನ್ನುವ ಕಾರಣಕ್ಕೆ ಅವರೆಲ್ಲಾ ನಮಗೆ ಬೆಂಬಲ ಕೊಟ್ಟಿದ್ದಾರೆ. ವಿಷಯಾಂತರ ಮಾಡಿ ಮನಸ್ಸಿಗೆ ನೋವಾಗುವ ಹೇಳಿಕೆ ಯಾರೂ ಕೊಡಬಾರದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಬಗ್ಗೆ ನಾನು ಏನೂ ಹೇಳಲ್ಲ. ಲಕ್ಷ್ಮೀ ಹೋರಾಟಕ್ಕೆ ಧುಮುಕಿದ್ದಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಅಭಿಮಾನ, ಗೌರವ ಇದೆ. ಹೋರಾಟದಲ್ಲಿ ಪಾಲ್ಗೊಂಡವರ ಬಗ್ಗೆ ಎಂದಿಗೂ ಒಳ್ಳೆಯ ಅಭಿಮಾನ ಇರುತ್ತದೆ. ಟೀಕೆ, ಟಿಪ್ಪಣಿ ಮಾಡಿದವರ ವಿರುದ್ಧ ಜಿಲ್ಲಾ ಘಟಕ ಪ್ರತಿಕ್ರಿಯೆ ಕೊಡಲಿದೆ ಎಂದು ಹೇಳಿದರು.