ಬೆಳಗಾವಿ: ಎಂಎಲ್‌ಸಿ ಸಿ.ಟಿ ಅವರ ಬಂಧನವನ್ನು ಖಂಡಿಸಿ ಶುಕ್ರವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಜನತಾ ಪಕ್ಷ ಗುರುವಾರ ಪ್ರಕಟಿಸಿದೆ. ಶಾಸಕ ಸಿಟಿ ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಕಾಂಗ್ರೆಸ್ ಗೂಂಡಾ ವರ್ತನೆಯನ್ನು ಬಿಜೆಪಿ ಸಹಿಸುವುದಿಲ್ಲ ಎಂದು ವಿಜಯೇಂದ್ರ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ವಾತಾವರಣ:ತುರ್ತು ಪರಿಸ್ಥಿತಿ ಹೇರಿ ಕುಖ್ಯಾತಿ ಪಡೆದಿರುವ ಕಾಂಗ್ರೆಸ್ ಈಗ ಕರ್ನಾಟಕದಲ್ಲಿ ವಾಸ್ತವಿಕ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವದ ಮಂದಿರ ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಚುನಾಯಿತ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡುವ ಹೇಯ ಕೃತ್ಯ ಎಸಗಲು ಗೂಂಡಾಗಳನ್ನು ಕಾಂಗ್ರೆಸ್ ಪ್ರಚೋದಿಸಿದೆ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಹಲ್ಲೆಗೆ ಒಳಗಾದ ನಮ್ಮ ಹಿರಿಯ ನಾಯಕ ಸಿ.ಟಿ.ರವಿ ಅವರನ್ನು ಬಂಧಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ
ಸದನದೊಳಗೆ ನಡೆದ ಘಟನೆಯೊಂದರ ದೂರಿನ ಆಧಾರದ ಮೇಲೆ ಸಿ.ಟಿ.ರವಿ ಅವರನ್ನು ಬಂಧಿಸಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕುವ ಸರ್ವಾಧಿಕಾರದ ಕ್ರಮವಾಗಿದೆ. ಕಾಂಗ್ರೆಸ್ ಶಾಸಕಾಂಗದ ಘನತೆಗೆ ಚ್ಯುತಿ ತರಲು ಮತ್ತು ಅದರ ಸಾಂವಿಧಾನಿಕ ಅಧಿಕಾರವನ್ನು ಹಾಳುಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಟಿ ರವಿ ವಿರುದ್ಧ ದೂರು ನೀಡಿದ್ದ ಸಚಿವೆ ಹೆಬ್ಬಾಳ್ಕರ್;ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ನಲ್ಲಿ ಅಶ್ಲೀಲ ಪದ ಬಳಸಿದ ಆರೋಪದಡಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಗುರುವಾರ ಸಂಜೆ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಬಂಧನಕ್ಕೆ ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ಪೊಲೀಸರು ಸಿ.ಟಿ.ರವಿ ಅವರನ್ನು ಹೊತ್ತುಕೊಂಡೇ ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ದರು. ಇದಕ್ಕೂ ಮುನ್ನ ಸುವರ್ಣ ವಿಧಾನಸೌಧದಲ್ಲಿ ಸಿ.ಟಿ.ರವಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿ ಬಿಜೆಪಿ ನಾಯಕರು ವಿಧಾನಸೌಧದ ಮುಂಭಾಗ ಪ್ರತಿಭಟಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ದೂರು, ಪ್ರತಿದೂರು ದಾಖಲು:ಸಿ.ಟಿ.ರವಿ ನನ್ನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಪರಿಷತ್ ಸಭಾಪತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ನೀಡಿದರೆ, ಇದಕ್ಕೆ ಪ್ರತಿದೂರು ನೀಡಿರುವ ಸಿ.ಟಿ.ರವಿ, ನಾನು ಆ ರೀತಿ ಪದ ಬಳಕೆ ಮಾಡಿಲ್ಲ. ಎಲ್ಲ ಮಹಿಳೆಯರನ್ನೂ ಗೌರವದಿಂದ ಕಾಣುತ್ತೇನೆ ಎಂದು ತಿಳಿಸಿದ್ದರು.
ಇದನ್ನು ಓದಿ:ನನ್ನ ಜೀವಕ್ಕೆ ಅಪಾಯವಿದೆ, ಕೊಲೆಗೂ ಸಂಚು ನಡೆಸಲಾಗುತ್ತಿದೆ: ಸಿ.ಟಿ.ರವಿ ಆರೋಪ