ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ(ಕೆಎಸ್‌ಆರ್‌ಟಿಸಿ) ನೌಕರರ ಅವಲಂಬಿತರಿಗೆ ಒಂದು ಕೋಟಿ ರೂ ಮೊತ್ತದ ಅಪಘಾತ ಪರಿಹಾರ ವಿಮೆ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ (ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್) 16 ನೌಕರರ ಕುಟುಂಬದವರಿಗೆ ಇದೇ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ 10 ಲಕ್ಷ ರೂ ಪರಿಹಾರ ವಿತರಿಸಲಾಗಿದೆ.
ನಿಗಮವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ ಒಂದು ಕೋಟಿ ರೂಪಾಯಿ ಅಪಘಾತ ವಿಮಾ ಪರಿಹಾರ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಜಾರಿಯಾದ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯನಿರತ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೆ 12 ನೌಕರರ ಕುಟುಂಬದವರಿಗೆ ತಲಾ 1 ಕೋಟಿ ರೂಪಾಯಿ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ.
ರಾಜೇಶ್ ಡಿ.ಸಿ (ಚಾಲಕ-ಕಂ-ನಿರ್ವಾಹಕ, ಅರಕಲಗೂಡು ಘಟಕ, ಹಾಸನ ವಿಭಾಗ) ಎಂಬವರು 29/07/2023ರಂದು ಮೃತಪಟ್ಟಿದ್ದು, ಮೃತರ ಅವಲಂಬಿತರಿಗೆ 1 ಕೋಟಿ ರೂಪಾಯಿ ಅಪಘಾತ ಪರಿಹಾರ ವಿಮೆಯ ಜೊತೆಗೆ, ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್ಬಿಎಫ್ ಹಾಗೂ ಗಂಪು ವಿಮಾ ಯೋಜನೆಯಿಂದ 14,19,980 ರೂ ಪರಿಹಾರವನ್ನು ಇಂದು ನೀಡಲಾಯಿತು.
ಆದರೆ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಸಾವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ದಾಖಲಾಗುತ್ತಿದೆ. ಈ ವಿಷಯ ಮನಗಂಡು ಪರಿಹಾರ ಮೊತ್ತವನ್ನು 10 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ನಿಗಮದ ಕುಟುಂಬ ಕಲ್ಯಾಣ ಪರಿಹಾರ ಯೋಜನೆ ಅಡಿಯಲ್ಲಿ ಕಳೆದ ನವೆಂಬರ್ 2023 ಮತ್ತು ಡಿಸೆಂಬರ್ 2023ರ ತಿಂಗಳಲ್ಲಿ ಮರಣ ಹೊಂದಿದ 16 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಇಂದು ವಿತರಿಸಲಾಯಿತು.