ಮೈಸೂರು:ಕೆಎಸ್ಆರ್ಟಿಸಿ ಬಸ್ನ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಆಯತಪ್ಪಿ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ. ಮಹದೇವಸ್ವಾಮಿ (35) ಮೃತ ದುರ್ದೈವಿಯಾಗಿದ್ದಾರೆ. ಮೃತರು ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಹಳೇಪುರ ಗ್ರಾಮದವರು ಎಂಬುದಾಗಿ ತಿಳಿದು ಬಂದಿದೆ.
ಇಂದು ಶುಕ್ರವಾರ ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಂಜನಗೂಡು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಮಲ್ಲನಮೂಲೆ ಮಠದ ಬಳಿ ಬಸ್ ವೇಗವಾಗಿ ಸಂಚರಿಸಿದೆ. ಬಾಗಿಲ ಬಳಿ ನಿಂತಿದ್ದ ಕಂಡಕ್ಟರ್ ಮಹದೇವಸ್ವಾಮಿ ಆಯತಪ್ಪಿ ಬಿದ್ದಿದ್ದಾರೆ. ಕೆಳಗಡೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು, ಕೊನೆಯುಸಿರೆಳೆದಿದ್ದಾರೆ.