ಕರ್ನಾಟಕ

karnataka

ETV Bharat / state

ಹಿಂದುತ್ವದ ಉಳಿವಿಗಾಗಿ ಸಂಕ್ರಾಂತಿಯಂದು ನೂತನ ಬ್ರಿಗೇಡ್​ಗೆ ನಾಮಕರಣ​: ಕೆ.ಎಸ್​. ಈಶ್ವರಪ್ಪ

ಬಾಗಲಕೋಟೆಯಲ್ಲಿ ಭಾನುವಾರ ನೂತನ ಬ್ರಿಗೇಡ್​ ಸಂಘಟನೆಯ ರಚನೆ ಕುರಿತಾಗಿ ಸಭೆ ನಡೆಯಿತು. ಸಾವಿರ ಸಾಧು ಸಂತರು, ಸ್ವಾಮೀಜಿಗಳನ್ನು ಸೇರಿಸಿ ಜನವರಿ 14ರಂದು ಬ್ರಿಗೇಡ್​ಗೆ ಹೆಸರು ಸೂಚನೆ ಮಾಡಲಾಗುವುದು ಎಂದು ಕೆ.ಎಸ್​. ಈಶ್ವರಪ್ಪ ತಿಳಿಸಿದ್ದಾರೆ.

By ETV Bharat Karnataka Team

Published : 4 hours ago

ಬಾಗಲಕೋಟೆಯಲ್ಲಿ ನಡೆದ ಚಿಂತನ ಮಂಥನ ಸಭೆ
ಬಾಗಲಕೋಟೆಯಲ್ಲಿ ನಡೆದ ಚಿಂತನ ಮಂಥನ ಸಭೆ (ETV Bharat)

ಬಾಗಲಕೋಟೆ:ಜನವರಿ 14ರಂದು ಒಂದು ಸಾವಿರ ಸಾಧು ಸಂತರು, ಸ್ವಾಮೀಜಿಗಳನ್ನು ಸೇರಿಸಿ ಬ್ರಿಗೇಡ್ ಹೆಸರು ಸೂಚನೆ ಮಾಡಲಾಗುತ್ತದೆ ಎಂದು ಮಾಜಿ ಡಿಸಿಎಂ ಕೆ. ಎಸ್​. ಈಶ್ವರಪ್ಪ ತಮ್ಮ ನಿರ್ಧಾರ ಪ್ರಕಟಿಸಿದರು.

ಈ ಮೂಲಕ ರಾಜ್ಯದಲ್ಲಿ ಬ್ರಿಗೇಡ್​ ಸಂಘಟನೆ ಮಾಡಿ, ದಲಿತರ, ಹಿಂದುಳಿದ ಸಮಾಜಕ್ಕೆ ತಮ್ಮ ಹಕ್ಕು ದೊರಕುವಂತೆ ಮಾಡುವ ಜೊತೆಗೆ ಹಿಂದುತ್ವ ಉಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯ ಮಾಡಲಾಗುತ್ತದೆ ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಕೆ.ಎಸ್​. ಈಶ್ವರಪ್ಪ (ETV Bharat)

ಬಾಗಲಕೋಟೆ ನಗರದ ಚರಂತಿಮಠ ಶಿವಾನುಭವನ ಮಂಟಪದಲ್ಲಿ ಭಾನುವಾರ ಸಾಧು ಸಂತರ ಹಾಗೂ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ಈಶ್ವರಪ್ಪ ಅವರ ನೇತೃತ್ವದಲ್ಲಿ ಹಿಂದುಳಿದ ದಲಿತ ಹಾಗೂ ಸಮಗ್ರ ಹಿಂದೂ ಸಮಸ್ಯೆಗಳ ಮತ್ತು ಸವಾಲ್ ಚಿಂತನ ಮಂಥನ ಸಭೆ ಜರುಗಿತು. ಸಮಾರಂಭದಲ್ಲಿ ತಿಂಥಣಿಯ ಕಾಗಿನೆಲೆಯ ಶಾಖಾ ಮಠದ ಸಿದ್ದರಾಮಾನಂದ ಪುರಿ ಶ್ರೀಗಳು ಜ್ಯೋತಿ ಬೆಳೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭ ಅಧ್ಯಕ್ಷತೆ ವಹಿಸಿ ಕೆ.ಎಸ್​. ಈಶ್ವರಪ್ಪ ಅವರು ಮಾತನಾಡಿ, "ಸಮಸ್ತ ಹಿಂದೂ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಬ್ರಿಗೇಡ್​​ ಮಾಡಬೇಕಾಗಿದೆ. ನನಗೆ ಪಕ್ಷ ಅನ್ಯಾಯ ಮಾಡಿಲ್ಲ, ಸಾಮಾನ್ಯ ವ್ಯಕ್ತಿಯನ್ನು ಡಿಸಿಎಂ ಮಾಡಿದೆ. ಇದನ್ನು ಹಿರಿಯರು ಗಮನಿಸುತ್ತಾರೆ. ಸರಿ ಮಾಡಿಯೇ ಮಾಡುತ್ತಾರೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೂಡಲಸಂಗಮದಲ್ಲಿ ಅಂತಿಮ ನಿರ್ಣಯ:ಮುಂದುವರೆದು "ಕೂಡಲಸಂಗಮದಲ್ಲಿ ಸಾವಿರಾರು ಸಾಧುಸಂತರನ್ನು ಸೇರಿಸಿ ಸ್ವಾಮೀಜಿಗಳಿಂದ ಬ್ರಿಗೇಡ್​ಗೆ ಏನು ಹೆಸರು ಇಡಬೇಕು ಎಂಬುದನ್ನು ತೀರ್ಮಾನ ಮಾಡಲಾಗುತ್ತದೆ. ಮುಂದಿನ ಸಂಕ್ರಾಂತಿಯಂದು ಸ್ವಾಮೀಜಿಗಳ ಪಾದಪೂಜೆ ಮಾಡಿ ಪ್ರತಿಜ್ಞೆ ಮಾಡುತ್ತೇವೆ ಎಂದು ಈಶ್ವರಪ್ಪ ಅವರು ತಿಳಿಸಿದರು.

ಸಮಾರಂಭದಲ್ಲಿ ಸಾನ್ನಿಧ್ಯವಹಿಸಿದ್ದ ತಿಂಥಣಿ ಮಠದ ಸಿದ್ದರಾಮನಂದಪುರಿ ಶ್ರೀಗಳು ಮಾತನಾಡಿ, "ಈಶ್ವರಪ್ಪನವರಿಗೆ ಬಿಜೆಪಿ ಪಕ್ಷದಿಂದ ಅನ್ಯಾಯವಾಗಿಲ್ಲ. ಈಶ್ವರಪ್ಪನವರನ್ನು ಹೊರಗೆ ಹಾಕಿದ್ದಕ್ಕೆ ಬಿಜೆಪಿಗೆ ಅನ್ಯಾಯವಾಗಿದೆ. ಎಲ್ಲೆಡೆ ಕುಟುಂಬದ ರಾಜಕಾರಣ, ಸ್ವಾರ್ಥ ಹೆಚ್ಚಾಗಿದ್ದು, ನಿಸ್ವಾರ್ಥ ರಾಜಕಾರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಶ್ವರಪ್ಪ ಅವರು ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಅವರಿಗೆ ಬೆಂಬಲವಾಗಿ ಎಲ್ಲಾ ಸ್ವಾಮೀಜಿಗಳು ನಿಲ್ಲುತ್ತೇವೆ" ಎಂದು ಅಭಯಹಸ್ತ ನೀಡಿದರು.

ಕೆ.ಎಸ್​. ಈಶ್ವರಪ್ಪ ಅವರು ತಮ್ಮ ರಾಜಕೀಯ ಭವಿಷ್ಯದ ಮುಂದಿನ ನಡೆ ಏನಾಗಬೇಕು ಎಂಬುದಕ್ಕೆ ಈ ಸಾಧು ಸಂತರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸುಮಾರು 30ಕ್ಕೂ ಅಧಿಕ ಮಠಾಧೀಶರು ವಿವಿಧ ಪ್ರದೇಶಗಳಿಂದ ಆಗಮಿಸಿ, ನಿಮ್ಮ ಬೆನ್ನಿಗೆ ಇದ್ದೇವೆ ಎಂದು ತಿಳಿಸಿದ್ದಾರೆ. ಜನವರಿ 14 ರಂದು ಕೂಡಲಸಂಗಮದಲ್ಲಿ ಬ್ರಿಗೇಡ್​ಗೆ ನಾಮಕರಣ ಮಾಡಿ, ಮತ್ತೆ ರಾಜಕೀಯ ಹೋರಾಟಕ್ಕೆ ಹೆಜ್ಜೆ ಹಾಕಲಿದ್ದಾರೆ.

ಇದನ್ನೂ ಓದಿ:ರಾಯಣ್ಣ ಚೆನ್ನಮ್ಮ ಬ್ರಿಗೇಡ್ ನಾಮಕರಣ ಕುರಿತಂತೆ ಅ. 20 ರಂದು ಬಾಗಲಕೋಟೆಯಲ್ಲಿ ನಿರ್ಧಾರ : ಕೆ ಎಸ್ ಈಶ್ವರಪ್ಪ

ABOUT THE AUTHOR

...view details