ಬೆಂಗಳೂರು: "ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅಕ್ರಮ ಡಿನೋಟಿಫಿಕೇಷನ್ ಆಗಿದೆ" ಎಂದು ದಾಖಲೆ ಬಿಡುಗಡೆ ಮಾಡುವ ಮೂಲಕ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಅವರು ಆರೋಪ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, "ರಾಜ್ಯಪಾಲರು ಕೆಲವು ಪ್ರಕರಣಗಳಲ್ಲಿ ವಿಳಂಬ ಮಾಡುತ್ತಿದ್ದಾರೆ. ತಪ್ಪು ಮಾಡಿದವರಿಗೆ ಅವರು ರಕ್ಷಣೆಗೆ ನಿಂತಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಅಕ್ರಮ ಒಂದೆರಡಲ್ಲ, ಹಲವಾರು ಇವೆ. ಈಗ ಮೊತ್ತೊಂದು ದಾಖಲೆ ಇದೆ. ಆಸ್ತಿ ಇರುವುದು ಮಠದಹಳ್ಳಿ ಗಂಗೇನಹಳ್ಳಿ ಬಡಾವಣೆ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾಧೀನಗೊಂಡಿದ್ದು, ಇದನ್ನು ಡಿನೋಟಿಫೈ ಮಾಡಬೇಕೆಂದು ದಾರಿಯಲ್ಲಿ ಹೋಗುವ ಯಾರೋ ದಾಸಯ್ಯ ಜಮೀನಿಗೆ ಸಂಬಂಧವೇ ಇಲ್ಲದ ರಾಜಶೇಖರಯ್ಯ ಅನ್ನುವವರು ಅರ್ಜಿ ಕೊಡ್ತಾರೆ. 2007 ರಲ್ಲಿ ಅರ್ಜಿ ಬಂದ ಅದೇ ದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಡಿನೋಟಿಫೈ ಮಾಡಲು ಸೂಚಿಸುತ್ತಾರೆ" ಎಂದು ಗಂಭೀರ ಆರೋಪ ಮಾಡಿದರು.
"ಜಮೀನಿನ ಅಸಲಿ ಮಾಲೀಕರು 21 ಜನರಿದ್ದಾರೆ. 30 ವರ್ಷಗಳ ಹಿಂದೆಯೇ ಈ ಜಮೀನು ಭೂಸ್ವಾಧೀನ ಆಗಿತ್ತು. ಯಾವುದು ಭೂಸ್ವಾಧೀನ ಆಗಿತ್ತೋ ಆ ಜಮೀನಿಗೆ ಕುಮಾರಸ್ವಾಮಿ ಅತ್ತೆ ಹೆಸರಿಗೆ ಜಿಪಿಎ ಮಾಡಿಕೊಳ್ಳುತ್ತಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಡಿನೋಟಿಫೈ ಮಾಡಲು ಬರುವುದಿಲ್ಲ ಎಂದು ಫೈಲ್ ತಿರಸ್ಕಾರ ಮಾಡುತ್ತಾರೆ. ಆದರೂ ಅಂದಿನ ಸಿಎಂ ಕುಮಾರಸ್ವಾಮಿ ಡಿನೋಟಿಫೈ ಮಾಡುವಂತೆ ಸೂಚಿಸುತ್ತಾರೆ. ಬಳಿಕ ಸರ್ಕಾರ ಬದಲಾಗಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಆಗ ಮತ್ತೆ ಅದೇ ಫೈಲ್ ಸಿಎಂ ಯಡಿಯೂರಪ್ಪ ಕೈಗೆ ಬರುತ್ತದೆ. ಕಾನೂನು ಗಾಳಿಗೆ ತೂರಿ ಯಡಿಯೂರಪ್ಪ 2009-10 ರಲ್ಲಿ ಭೂಸ್ವಾಧೀನದಿಂದ ಕೈ ಬಿಡುತ್ತಾರೆ" ಎಂದು ಹೇಳಿದರು.