ಮಂಗಳೂರು: ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಗೆ ಗುಂಡು ಹಾರಿಸಿ ಹಣ ದೋಚಿರುವ ಪ್ರಕರಣದ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದೆ.
ನಗರದ ಹೊರವಲಯದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಇಂದು ಹಾಡಹಗಲೇ ಮುಸುಕುಧಾರಿಗಳು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರ ನಡುವೆ ಶಸ್ತ್ರಸಜ್ಜಿತ ತಂಡದಿಂದ ದರೋಡೆ ನಡೆದಿದೆ.
ಸುಮಾರು 25 ರಿಂದ 35 ವರ್ಷ ವಯಸ್ಸಿನ ಐದಾರು ಜನರ ತಂಡ ಮುಖಕ್ಕೆ ಮಾಸ್ಕ್ ಧರಿಸಿ, ಪಿಸ್ತೂಲ್, ತಲ್ವಾರ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬ್ಯಾಂಕ್‌ಗೆ ಪ್ರವೇಶಿಸಿದೆ. ಈ ವೇಳೆ ಐದು ಮಂದಿ ಉದ್ಯೋಗಿಗಳು ಬ್ಯಾಂಕಿನಲ್ಲಿದ್ದರು. ಆ ಬಳಿಕ ಬ್ಯಾಂಕ್ ಸಿಬ್ಬಂದಿಗಳನ್ನು ಬೆದರಿಸಿ ದರೋಡೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಪೊಲೀಸ್ ಕಮಿಷನರ್ ಹೇಳಿದ್ದೇನು?:ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, "ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು, ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಕಪಾಟನ್ನು ತೆರೆಸಿ, ದರೋಡೆ ಮಾಡಿದ್ದಾರೆ. ಕದ್ದ ವಸ್ತುಗಳ ಮೌಲ್ಯ 4 ಕೋಟಿಗಳಷ್ಟಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಆದರೂ ವಿವರವಾದ ಮೌಲ್ಯಮಾಪನಗಳು ನಡೆಯುತ್ತಿವೆ" ಎಂದು ತಿಳಿಸಿದ್ದಾರೆ.
"ಅಪರಾಧಿಗಳು ಕಪ್ಪು ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.