ಬೆಂಗಳೂರು :ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸುವಾಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾಂಗ್ರೆಸ್ನ ಆಡಳಿತವನ್ನು ಬಸ್ಗೆ ಹೋಲಿಸಿದ ವಿಚಾರ ಸದನದಲ್ಲಿ ಸೋಮವಾರ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಸರ್ಕಾರವು ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದೆ. ಕಾಂಗ್ರೆಸ್ ಆಡಳಿತವನ್ನು ಬಸ್ಗೆ ಹೋಲಿಸಿದ ಕೋಟ ಶ್ರೀನಿವಾಸ್, ಸರ್ಕಾರದಲ್ಲಿ ಗಟ್ಟಿಮುಟ್ಟಾದ ಬಸ್ ಇದೆ. 136 ಜನರ ಸುಭದ್ರ ಪ್ರಯಾಣಿಕರಿದ್ದಾರೆ. ಆಡಳಿತದ ಅನುಭವಿರುವ ಸಿಎಂ ಸಿದ್ದರಾಮಯ್ಯ ಅವರು ಡ್ರೈವಿಂಗ್ ಸೀಟ್ನಲ್ಲಿ ಸ್ಟೇರಿಂಗ್ ಹಿಡಿದಿದ್ದಾರೆ. ಇನ್ನೇನು ಬಸ್ ವೇಗವಾಗಿ ಓಡಿಸಬೇಕು ಎನ್ನುವಾಗ ಬ್ರೇಕ್ ಅವರ ಬಳಿಯಿಲ್ಲ. ಈ ಬ್ರೇಕ್ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬಳಿ ಇದೆ.
ಬಸ್ ಕೊಡುವಾಗ ಹೇಳಿ ಕೊಟ್ಟಿದ್ದಾರೆ. ನಿನಗೆ ಯಾವಾಗ ಬೇಕೋ ಆಗ ಬ್ರೇಕ್ ಹಾಕು ಅಂತ ಡಿಕೆಶಿಗೆ ಹೇಳಿದ್ದಾರೆ. ಅದು ಹೋಗಲಿ ಬೇಕಾದಾಗ ಕ್ಲಚ್ ಹಾಕೋಣ ಅಂತ ಹೇಳಿದರೆ ಕ್ಲಚ್ ಸಚಿವ ರಾಜಣ್ಣ ಬಳಿಯಿದೆ. ಗೇರ್ ಸುರ್ಜೇವಾಲಾ ಬಳಿಯಿದೆ. ಎಕ್ಸಲೇಟರ್ ಕೊಡೋಣ ಅಂದ್ರೆ ಅದು ಅವರ ಬಳಿ ಇಲ್ಲ. ಎಕ್ಸಲೇಟರ್ ಮೈಸೂರು ಮುನಿಯಪ್ಪ ಬಳಿ ಅಲ್ಲ ಸಚಿವ ಹೆಚ್ ಸಿ ಮಹದೇವಪ್ಪ ಬಳಿಯಿದೆ. ಈ ವೇಳೆ ಮುನಿಯಪ್ಪ, ಮಹದೇವಪ್ಪ ವ್ಯತ್ಯಾಸ ಗೊತ್ತಾಗಲ್ವಾ ಎಂದ ಸಭಾಪತಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ್, ಬೆಳಗ್ಗೆ ಗೊತ್ತಾಗಲಿಲ್ಲ, ಈಗ ಗೊತ್ತಾಯ್ತು ಎಂದರು. ಒಟ್ಟಾರೆ ಇವರ ಬಳಿ ಬಸ್ ಇದೆ, ಆದ್ರೆ ಬ್ರೇಕ್, ಕ್ಲಚ್ಚು, ಎಕ್ಸಲೇಟರ್, ಸ್ಟೇರಿಂಗ್ ಎಲ್ಲವೂ ಒಬ್ಬೊಬ್ಬರ ಬಳಿ ಇದೆ ಎಂದು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.
ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಸುಧಾಕರ್, ನಿಮ್ಮ ಕ್ಲಚ್, ಬ್ರೇಕ್ ಎಲ್ಲವನ್ನು ದೆಹಲಿಯಲ್ಲಿ ಬಿಟ್ಟು ಬಂದಿದ್ದೀರಾ ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ಸಭಾನಾಯಕ ಎಸ್.ಎಸ್ ಬೋಸರಾಜು, ನಮ್ಮನ್ನ ಪ್ರಶ್ನೆ ಮಾಡುತ್ತಿದ್ದೀರಾ? ನಿಮ್ಮ ಪಕ್ಷದ ಮಾಜಿ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಏನ್ ಮಾಡಿದ್ದರೆ ಅಂತಾ ನಮಗೆ ಗೊತ್ತಿಲ್ವಾ? ರಾಜ್ಯದ ಆಭಿವೃದ್ಧಿ ಬಗ್ಗೆ ನಿಮ್ಮ ಸಂಸದರು ಯಾವತ್ತೂ ಪ್ರಶ್ನೆಯೇ ಮಾಡಿಲ್ಲ ಎಂದು ಆರೋಪಿಸಿದರು. ಅಂತಿಮವಾಗಿ ರಾಜ್ಯಪಾಲರ ಬಳಿ ಸುಳ್ಳು ಹೇಳಿಸಿದ್ದೀರಿ ಅಂತ ಹೇಳಿ ಕೋಟ ಶ್ರೀನಿವಾಸ್ ಪೂಜಾರಿ ಮಾತು ಮುಗಿಸಿದರು.
ಇದನ್ನೂ ಓದಿ :ಸರ್ಕಾರಿ, ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಒಂದೇ ಮಾನದಂಡ: ಮಧು ಬಂಗಾರಪ್ಪ