ಕೊಪ್ಪಳ: ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎರಡು ಕೊಲೆ ಹಾಗೂ ಒಂದು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು. ಗುರುವಾರ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಲಿವಿಂಗ್ ಟು ಗೆದರ್‌ನಲ್ಲಿದ್ದ ವ್ಯಕ್ತಿ ಕೊಲೆ: ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಹದ್ದೂರ ಬಂಡಿ ಗ್ರಾಮದಲ್ಲಿ ಶ್ರೀನಾಥ ಖಾರ್ವಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.16ರಂದು ದೂರು ದಾಖಲಾಗಿತ್ತು. ಅಲ್ಲಿನ ಖಾಜಾಬನಿ ಎಂಬ ಮಹಿಳೆಯೊಂದಿಗೆ ಈ ವ್ಯಕ್ತಿ ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದ್ದರು. ಅಲ್ಲದೇ ಬೇರೆ ಹೆಣ್ಣು ಮಕ್ಕಳೊಂದಿಗೂ ಸಂಪರ್ಕವಿತ್ತು. ಇದರಿಂದಾಗಿ ಹಲ್ಲೆಗೈದು ಕೊಂದಿರುವುದಾಗಿ ಖಾಜಾಬನಿ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.