ಕಾಂಗ್ರೆಸ್ ಅಭ್ಯರ್ಥಿಗಳ ಸಂಭ್ರಮಾಚರಣೆ (ETV Bharat) ಕೊಪ್ಪಳ:ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸೋಲು ಅನುಭವಿಸಿದ್ದ ಹಿಟ್ನಾಳ ಕುಟುಂಬ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಗೆಲುವಿನೊಂದಿಗೆ ನಾಲ್ಕನೇ ಪ್ರಯತ್ನದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಕೆ.ಬಸವರಾಜ ಅವರನ್ನು 45 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. 45 ಸಾವಿರಕ್ಕೂ ಹೆಚ್ಚು ಅಧಿಕ ಮತಗಳಿಂದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿದ್ದಾರೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು, ಕಾರ್ಯಕರ್ತರು, ಮುಖಂಡರ ಶ್ರಮ ನನ್ನ ಗೆಲುವಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ಜನಪರ ಕಾರ್ಯಗಳನ್ನು, ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುತ್ತೇನೆ ಎಂದರು.
ಹಿಟ್ನಾಳ ಕುಟುಂಬ ಹ್ಯಾಟ್ರಿಕ್ ಸೋಲಿನಿಂದ ಪಾರು:ಹಿಟ್ನಾಳ ಕುಟುಂಬದಿಂದ 2014ರಲ್ಲಿ ಕೆ.ಬಸವರಾಜ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ರಾಜಶೇಖರ ಹಿಟ್ನಾಳ ಸೋಲುಂಡಿದ್ದರು. ಈ ಬಾರಿ ಲೋಕಸಭಾ ಗುದ್ದಾಟದಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸೋಲಿನಿಂದ ಪಾರಾಗಿದ್ದಾರೆ.
ಜಾತಿ ಲೆಕ್ಕಾಚಾರ ತಲೆಕೆಳಗೆ:ಕೊಪ್ಪಳ ಲೋಕಸಬಾ ಚುನಾವಣೆ ಇತಿಹಾಸವನ್ನ ನೋಡಿದಾಗ ಲಿಂಗಾಯತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು ಹೆಚ್ಚು. 1991ರಲ್ಲಿ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಸಹ ಸೋಲು ಅನುಭವಿಸಿದ್ದರು. ಇವರ ವಿರುದ್ದ ಸ್ಪರ್ಧಿಸಿದ್ದ ಲಿಂಗಾಯತ ಸಮಾಜದ ಬಸವರಾಜ ಪಾಟೀಲ ಅನ್ವರಿ ಜಯಗಳಿಸಿದ್ದರು. ಕಳೆದ 15 ವರ್ಷಗಳ ಕಾಲ ಲೋಕಸಭಾ ಕ್ಷೇತ್ರದ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ಸಿಗೆ ಈ ಬಾರಿ ಜಯಗಳಿಸುವ ಮೂಲಕ ಜಾತಿ ಲೆಕ್ಕಾಚಾರವನ್ನು ತೆಲೆಕೆಳಗಾಗಿಸಿದೆ.
ಶಿವರಾಜ್ ತಂಗಡಗಿ ಪ್ರತಿಕ್ರಿಯೆ:ಬಹಳ ವರ್ಷದ ನಂತರ ಕೊಪ್ಪಳದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದೇವೆ. ಎಲ್ಲರ ಪರಿಶ್ರಮದಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಾಗಿದೆ. ಈ ಮೂಲಕ ಹೊಸ ಇತಿಹಾಸ ದಾಖಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಚುನಾವಣೆ ಫಲಿತಾಂಶದ ಸಂಭ್ರಮದಲ್ಲಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಗಂಗಾವತಿಯಲ್ಲಿ ಅತೀ ಹೆಚ್ಚು ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವುದರ ಮೂಲಕ ಜನರು ಶಾಸಕ ಜನಾರ್ದನ ರೆಡ್ಡಿ ಕಪಾಳಕ್ಕೆ ಹೊಡೆದಿದ್ದಾರೆ. ಚುನಾವಣಾ ಫಲಿತಾಂಶಪೂರ್ವ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ನಾನು ಈ ಮುಂಚೆಯೇ ಹೇಳಿದ್ದೆ. ನಿನ್ನೆವರೆಗೂ ಪ್ರಸಾರವಾದ ಎಕ್ಸಿಟ್ ಪೋಲ್ ಅದು ಮೋದಿ ಅವರು ಎಕ್ಸಿಟ್ ಪೋಲ್ ಎಂದು ಕುಟುಕಿದರು. ಸಿದ್ದರಾಮಯ್ಯ ಅವರ ಮಾತು, ಖರ್ಗೆ ಆಶೀರ್ವಾದ ಹಾಗೂ ಡಿಕೆಶಿ ಅವರ ಸಹಕಾರದಿಂದ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.