ಬೆಳಗಾವಿ: "ಕಿತ್ತೂರು ರಾಣಿ ಚೆನ್ನಮ್ಮಾಜಿ ಇತಿಹಾಸ ಮತ್ತು ವಿಚಾರಧಾರೆಗಳು ಬೆಳಗಾವಿ ಜಿಲ್ಲೆಗೆ ಸಿಮೀತವಾಗಬಾರದು. ರಾಜ್ಯ ರಾಜಧಾನಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿಗೂ ಕೊಂಡೊಯ್ಯುವ ಮಹತ್ವದ ಕೆಲಸ ಆಗಬೇಕಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಿತ್ತೂರಿನಲ್ಲಿ ಬುಧವಾರ ಸಂಜೆ ಚೆನ್ನಮ್ಮನ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, "ರಾಜ್ಯ, ರಾಷ್ಟ್ರದಲ್ಲಿ ಛಾಪು ಮೂಡಿಸಲು ಹಲವಾರು ಕಲ್ಪನೆ, ಚಿಂತನೆ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಚೆನ್ನಮ್ಮಾಜಿ ಹೋರಾಟ, ಅವರ ಜೊತೆಗಿದ್ದ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಸೇರಿ ಹಲವು ಹೋರಾಟಗಾರರು ಅವರ ಜೊತೆಗೂಡಿ ಹೋರಾಟ ಮಾಡಿದ್ದರು. ಹೊಸ ಪೀಳಿಗೆಗೆ ಅವರ ಹೋರಾಟ, ಆದರ್ಶ ಮತ್ತು ಕಲ್ಪನೆಗಳನ್ನು ಈ ವೇದಿಕೆ ಮೂಲಕ ತಿಳಿಸುವುದಾಗಿದೆ".
200ನೇ ಕಿತ್ತೂರು ವಿಜಯೋತ್ಸವ (ETV Bharat) "ಕಣ್ಮರೆಯಾಗುತ್ತಿರುವ ಗಾಂಧೀಜಿ, ಬಸವಣ್ಣ, ಅಂಬೇಡ್ಕರ್, ಶಾಹು ಮಹಾರಾಜ ಸೇರಿ ಹಲವು ಮಹನೀಯರ ಇತಿಹಾಸ ಪುನರಾವರ್ತನೆ ಆಗಬೇಕು. ಅವರ ಆದರ್ಶಗಳನ್ನು ನಾವೆಲ್ಲಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇನ್ನು ರಾಣಿ ಚನ್ನಮ್ಮನ ಇತಿಹಾಸ ಅಧ್ಯಯನ ಪೀಠ ಬೆಳಗಾವಿಗೆ ಸ್ಥಳಾಂತರ ಆಗಬೇಕು. ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡುವುದು ಸೇರಿ ಮತ್ತಿತರ ಕಾರ್ಯಗಳು ಆಗಬೇಕಿದೆ" ಎಂದರು.
200ನೇ ಕಿತ್ತೂರು ವಿಜಯೋತ್ಸವ (ETV Bharat) ಚೆನ್ನಮ್ಮ ಸ್ಫೂರ್ತಿ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಮಾತನಾಡಿ, "ನನ್ನಂಥ ಲಕ್ಷಾಂತರ ಮಹಿಳೆಯರಿಗೆ ಚೆನ್ನಮ್ಮ ಸ್ಫೂರ್ತಿ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಚೆನ್ನಮ್ಮ. ಕಿತ್ತೂರು ನಾಡು ಸ್ವಾಭಿಮಾನದ ನಾಡಾಗಿದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತಹ ಕಾಲದಲ್ಲಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಧೀರ ಮಹಿಳೆ. ರಾಜ್ಯದ ಶ್ರೀಮಂತ ಸಂಸ್ಕೃತಿಗೆ ರಾಣಿ ಚೆನ್ನಮ್ಮ, ಅಮಟೂರ ಬಾಳಪ್ಪನವರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಇಂದಿನ ಮಕ್ಕಳಿಗೆ ಮನವರಿಕೆ ಮಾಡಬೇಕಾಗಿದೆ. ಬಡವರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ವಿಶೇಷವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದು, ನಮ್ಮ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮೇಲೆ ನಿಮ್ಮ ಆಶೀರ್ವಾದ ಇರಲಿ" ಎಂದು ಕೇಳಿಕೊಂಡರು.
200ನೇ ಕಿತ್ತೂರು ವಿಜಯೋತ್ಸವ (ETV Bharat) ವಿಜಯೋತ್ಸವ ಆಗಿ ಉಳಿಯದೇ ಪ್ರೇರಾಣಾದಾಯಿ ಆಗಲಿ:ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, "200ನೇ ವಿಜಯೋತ್ಸವ ಜನೋತ್ಸವ ಆಗಿದೆ. ಇದು ಕೇವಲ ವಿಜಯೋತ್ಸವ ಆಗಿ ಉಳಿಯದೇ ಪ್ರೇರಾಣಾದಾಯಿ ಆಗಲಿ. ರಾಣಿ ಚೆನ್ನಮ್ಮ ನಮಗೆ ಸದಾಕಾಲ ಪ್ರೇರಣೆ. ಕಿತ್ತೂರಿನ ಮೂಲಕ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದು ಇಲ್ಲಿಂದಲೇ. ಹಾಗಾಗಿ, ಕಿತ್ತೂರಿಗೆ ವಿಶೇಷ ಗುರುತಿಸುವಿಕೆ ಇದೆ. ಅದಕ್ಕೆ ತಕ್ಕ ಹಾಗೆ ಅಭಿವೃದ್ಧಿ ಆಗಬೇಕು. ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆಗೊಳಿಸುವ ಮೂಲಕ ಗೌರವ ಸಲ್ಲಿಸಿದೆ" ಎಂದರು.
ಅಂಚೆ ಚೀಟಿಗೆ ಸಂತೋಷ ಪಡಬೇಕಿಲ್ಲ:ಸಾನ್ನಿಧ್ಯ ವಹಿಸಿದ್ದ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, "1977ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚೆನ್ನಮ್ಮನವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. 200ನೇ ವರ್ಷದ ಸಂಭ್ರಮದಲ್ಲೂ ಬಿಡುಗಡೆ ಆಗಿದೆ. ಕೇವಲ ಅಂಚೆ ಚೀಟಿ ಬಿಡುಗಡೆಗೆ ಸಂತೋಷ ಪಡುವ ಅವಶ್ಯಕತೆ ಇಲ್ಲ. ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದು ಮೊದಲು ಚೆನ್ನಮ್ಮ. ಶರಣ ಧರ್ಮದ ತಳಹದಿಯ ಮೇಲೆ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಚನ್ನಮ್ಮ. ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಚನ್ನಮ್ಮನ ಇತಿಹಾಸವನ್ನು ಪಠ್ಯದಲ್ಲಿ ಅಳವಡಿಸುವ ಕೆಲಸ ಮಾಡಬೇಕು. ರೈಲು ಬಿಡಿ ಭಾಗಗಳ ತಯಾರಿಕಾ ಕಾರ್ಖಾನೆ, ಹೆಣ್ಣು ಮಕ್ಕಳಿಗಾಗಿ ಮಹಿಳಾ ಮೆಡಿಕಲ್ ಕಾಲೇಜನ್ನು ಕಿತ್ತೂರಿನಲ್ಲಿ ಸ್ಥಾಪಿಸಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಬೇಕು. ಮೈಸೂರು ದಸರಾ ಮಾದರಿಯಲ್ಲಿ ಕಿತ್ತೂರು ಉತ್ಸವ ಆಚರಿಸುವಂತೆ" ಒತ್ತಾಯಿಸಿದರು.
ಕಿತ್ತೂರು ಯಾರಿಗೂ ಬಗ್ಗದ ಗಂಡು ಮೆಟ್ಟಿದ ನಾಡು:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, "ಕಿತ್ತೂರು ಊರಿನಿಂದ ಬೆಳಗಾವಿ ಜಿಲ್ಲೆಗೆ ಗಂಡು ಮೆಟ್ಟಿದ ನಾಡು ಎಂದು ಹೆಸರು ಬಂದಿದೆ. ಇದು ಯಾರಿಗೂ ಬಗ್ಗದೆ ಇರುವ ನಾಡು, ನಮ್ಮಲ್ಲಿ ಸ್ವಾಭಿಮಾನದ ರಕ್ತ ಹರಿಯುತ್ತಿದೆ. ಹೊಸ ಪೀಳಿಗೆಗೆ ಚೆನ್ನಮ್ಮ ಮತ್ತು ಅವರ ಹಿಂಬಾಲಕರ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಸಂಶೋಧನೆ ಹೆಚ್ಚೆಚ್ಚು ಆಗಬೇಕು. 200ನೇ ವರ್ಷದ ವಿಜಯೋತ್ಸವ ಆಚರಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಕಿತ್ತೂರು ಕೊಟೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಕಾರ್ಯವನ್ನು ಕೆಲವೇ ದಿನಗಳಲ್ಲಿ ಕೃತಿ ಮೂಲಕ ಮಾಡಿ ತೋರಿಸಲಾಗುವುದು. ಕಿತ್ತೂರು ಚನ್ನಮ್ಮನ ಸಂಶೋಧನಾ ಕೇಂದ್ರವನ್ನು ಕಿತ್ತೂರಿಗೆ ನೀಡಬೇಕು" ಎಂದು ಆಗ್ರಹಿಸಿದರು.
ರಾಣಿ ಚೆನ್ನಮ್ಮನ ವಿಜಯೋತ್ಸವದ 200ನೇ ವರ್ಷದ ಸ್ಮರಣಾರ್ಥವಾಗಿ ಕಿತ್ತೂರು ರಾಣಿ ಚೆನ್ನಮ್ಮನ ಅಂಚೆ ಚೀಟಿ, ಶಾಶ್ವತ ಅಂಚೆ ರದ್ಧತಿ ಹಾಗೂ ವಿವಿಧ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಡಾ. ಸಂತೋಷ ಹಾನಗಲ್ ಸಂಪಾದಕತ್ವದ "ದಿ ಪೋರ್ಟೆಸ್ ಆಫ್ ಪಿಯರಲೆಸ್ಸ್ ಡ್ರೀಮ್ಸ್" ಹಾಗೂ ಯ.ರು.ಪಾಟೀಲ ಸಂಪಾದಕತ್ವದ "ಸ್ವಾತಂತ್ರ್ಯಶ್ರೀ" ಸ್ಮರಣ ಸಂಚಿಕೆಗಳನ್ನು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಮತ್ತು ಶಾಸಕ ಮಹಾಂತೇಶ ಕೌಜಲಗಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ರಾಜು(ಆಸೀಫ್) ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ.ಸಿ.ಇ.ಓ ರಾಹುಲ್ ಶಿಂಧೆ , ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೆಶಕ ಕೆ.ಎಚ್.ಚನ್ನೂರ, ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಸೌಮ್ಯಾ ಬಾಪಟ, ಬೈಲಹೊಂಗಲ ಎಸಿ ಪ್ರಭಾವತಿ ಫಕೀರಪುರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕುನಾಲ್ ಹಾಡಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು: ಕುಂದಾನಗರಿಯಲ್ಲಿ ಸಂಗೀತ ರಸದೌತಣ