ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹುಲಿಯೊಂದು ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯದಲ್ಲಿದ್ದ 13 ವರ್ಷದ 'ಶೌರ್ಯ' ಎಂಬ ಹೆಸರಿನ ಗಂಡು ಹುಲಿ ಮೃತಪಟ್ಟಿದೆ.
Mycoplasma, Cytauxzonosis ಮತ್ತು Babesiosis ಎಂಬ ವಿರಳ ರೋಗದಿಂದ ಶೌರ್ಯ ಬಳಲುತ್ತಿದ್ದ. ಕಳೆದ 21 ದಿನಗಳಿಂದ ವನ್ಯಜೀವಿ ವೈದ್ಯ ತಜ್ಞರ ಸಲಹೆಯಂತೆ ಮೃಗಾಲಯದಲ್ಲೇ ಶೌರ್ಯನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ 9.40ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಷ್ಟು ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ, ಕೇಂದ್ರ ಸರ್ಕಾರದ ನಿಯಮಾನುಸಾರ ಗೌರವಪೂರ್ವಕವಾಗಿ ಮೃಗಾಲಯದ ಆವರಣದಲ್ಲೇ ಶೌರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ಮಾರಿಯಾ ಕ್ರಿಷ್ಟು ರಾಜಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸುರ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ಮೃಗಾಲಯದ ವೈದ್ಯ ಡಾ.ನಾಗೇಶ ಹುಯಿಲಗೋಳ, ಪಶುವೈದ್ಯಕೀಯ ಇಲಾಖೆಯ ವೈದ್ಯ ಡಾ. ಪ್ರಶಾಂತ ಕಾಂಬಳೆ ಮತ್ತು ಮೃಗಾಲಯದ ಸಿಬ್ಬಂದಿ ಇದ್ದರು.