ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಪಟ್ಟಣದ ಅಲ್ಲಮ್ಮ ಪ್ರಭುಲಿಂಗೇಶ್ವರ ದೇವಾಲಯದಲ್ಲಿ ಕಿಚಡಿ ಜಾತ್ರೆ ಹಾಗೂ ಮಹಾಲಿಂಗಪುರ ಪಟ್ಟಣದಲ್ಲಿ ಜಟಾ ಪ್ರದರ್ಶನ ಜಾತ್ರೆ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಿಚಡಿ ಜಾತ್ರೆಯ ವೇಳೆ ಬೃಹದಾಕಾರದ ಪಾತ್ರೆಯಲ್ಲಿ ಕ್ವಿಂಟಲ್‌ಗಟ್ಟಲೆ ಬೇಳೆ, ಅಕ್ಕಿ ಕಿಚಡಿ, ಸಾರು ತಯಾರಿಸಿ ಭಕ್ತರಿಗೆ ವಿತರಿಸಲಾಯಿತು. ಹಿಂದಿನ ಕಾಲದಲ್ಲಿ ರೋಗ-ರುಜಿನಗಳು ಹರಡಿದಾಗ ಗ್ರಾಮ ಬಿಟ್ಟು ಜನರು ಇಲ್ಲಿಗೆ ಬಂದಿದ್ದರಂತೆ. ಆಗಿನ ಅಲ್ಲಮಪ್ರಭು ಸ್ವಾಮೀಜಿ ಭಕ್ತರಿಗೆ ಬೇಳೆ ಹಾಗೂ ಅಕ್ಕಿ ಮಿಶ್ರಣದ ಕಿಚಡಿ ಅನ್ನ, ಸಾರು ಪ್ರಸಾದ ನೀಡಿದ್ದರಂತೆ. ಆಗ ಎಲ್ಲ ರೋಗ ಮಾಯವಾಗಿತ್ತೆಂಬ ನಂಬಿಕೆ ಇಲ್ಲಿದೆ. ಈ ನಂಬಿಕೆಯಿಂದಲೇ ಪ್ರತೀ ವರ್ಷ ಜಾತ್ರೆ ಸಮಯದಲ್ಲಿ ಕಿಚಡಿ ಮಾಡಿ, ಪ್ರಸಾದ ವಿತರಿಸಲಾಗುತ್ತದೆ.
ಮೊದಲು ಕೇವಲ 10 ಕೆ.ಜಿ.ಯಿಂದ ಪ್ರಾರಂಭವಾದ ಕಿಚಡಿ ಪ್ರಸಾದ ಈಗ 125 ಕೆ.ಜಿ.ಗೂ ಹೆಚ್ಚು ಪ್ರಮಾಣದಲ್ಲಿ ತಯಾರಿಸಾಗುತ್ತಿದೆ. ಭಕ್ತರು ನೀಡಿದ ದೇಣಿಗೆಯಲ್ಲಿ ಪ್ರತೀ ವರ್ಷ ಪ್ರಮಾಣ ಹೆಚ್ಚಾಗುತ್ತಾ ಸಾಗಿದೆ. ಈಗಿನ ಪ್ರಭುಲಿಂಗೇಶ್ವರ ಸ್ವಾಮೀಜಿ ಪ್ರಸಾದಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶಾಸಕರು, ಸಂಸದರು ಸೇರಿದಂತೆ ಇತರೆ ಜನಪ್ರತಿನಿಧಿಗಳು, ಮಹಾರಾಷ್ಟ್ರ ಸುತ್ರಮುತ್ತಲಿನ ಭಕ್ತರು ಆಗಮಿಸಿ, ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಕೆ ತೀರಿಸಿದರು.