ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕೇರಳ ಮಾದರಿ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಚಿವ ಡಾ.ಜಿ.ಪರಮೇಶ್ವರ್ - ವಿಧಾನಸಭೆ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುನ್ನ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಆರಂಭಿಸುವ ಕುರಿತು ಅನಿವಾಸಿ ಕನ್ನಡಿಗರು ಬೇಡಿಕೆ ಇಟ್ಟಿದ್ದರು. ಹೀಗಾಗಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೇರಳ ಮಾದರಿ ಸಚಿವಾಲಯ ನಿರ್ಮಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವಿಧಾನಸಭೆಗೆ ತಿಳಿಸಿದರು.

Dr. G. Parameshwar spoke in the assembly. ​
ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಮಾತನಾಡಿದರು.

By ETV Bharat Karnataka Team

Published : Feb 21, 2024, 3:50 PM IST

ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಮಾತನಾಡಿದರು.

ಬೆಂಗಳೂರು:ರಾಜ್ಯದಲ್ಲಿಕೇರಳದ ಮಾದರಿ ಅನಿವಾಸಿ ಭಾರತೀಯರ ಸಚಿವಾಲಯ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ವಿಧಾನಸಭೆಯಲ್ಲಿ ಭರವಸೆ ನೀಡಿದರು.

ವಿಧಾನಸಭೆಯ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ನೇತೃತ್ವದಲ್ಲಿ 15ಕ್ಕೂ ಹೆಚ್ಚು ವಿವಿಧ ರಾಷ್ಟ್ರಗಳ ಅನಿವಾಸಿ ಭಾರತೀಯರು ಹಾಗೂ ಕನ್ನಡಿಗರು ಸದನದ ಕಾರ್ಯಕಲಾಪಗಳನ್ನು ವೀಕ್ಷಿಸುತ್ತಿರುವ ವಿಚಾರವನ್ನು ಸ್ವಾಗತಿಸಿ ಅವರು ಮಾತನಾಡಿದರು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆ ಸಿದ್ಧಪಡಿಸುವಾಗ ಪ್ರತ್ಯೇಕ ಸಚಿವಾಲಯವನ್ನು ಮಾಡುವ ಬೇಡಿಕೆಯನ್ನು ಅನಿವಾಸಿ ಭಾರತೀಯರು ಇಟ್ಟಿದ್ದರು. ಅದರಂತೆ ಪ್ರಣಾಳಿಕೆಯಲ್ಲಿ ಆ ವಿಚಾರವನ್ನು ಸೇರಿಸಿದ್ದೆವು. ಅವರದೇ ಆದ ಸಮಸ್ಯೆಗಳಿರುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಚಿವಾಲಯ ಮಾಡಲಾಗುವುದು ಎಂದು ಹೇಳಿದರು.

ಕಾನೂನಾತ್ಮಕವಾಗಿ ಅನಿವಾಸಿ ಭಾರತೀಯರಿಗೆ ಅಗತ್ಯ ಸಹಾಯ ಮಾಡುತ್ತೇವೆ ಎಂದು ತಿಳಿಸಿದ ಸಚಿವರು, ಕೆನಡಾ, ಯುಕೆ, ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳ ಅನಿವಾಸಿ ಭಾರತೀಯರು ಸದನದ ಕಲಾಪ ವೀಕ್ಷಿಸುತ್ತಿದ್ದಾರೆ. ಅವರನ್ನು ಸ್ವಾಗತಿಸುತ್ತೇನೆ ಎಂದರು.

ಉದ್ಯೋಗ ಅರಿಸಿಕೊಂಡು ಬೇರೆ ಬೇರೆ ದೇಶಗಳಲ್ಲಿ ಉದ್ಯೋಗ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಅನೇಕರು ಉದ್ಯಮಿಗಳಾಗಿ ಯಶಸ್ವಿಯಾಗಿದ್ದಾರೆ. ಶೇ.60ರಿಂದ 80ರಷ್ಟು ಅನಿವಾಸಿ ಭಾರತೀಯರು ಹೊರ ರಾಷ್ಟ್ರಗಳಲ್ಲಿ ಗಳಿಸಿದ ಆದಾಯವನ್ನು ಭಾರತಕ್ಕೆ ಮರಳಿ ತರುವ ಮನಸ್ಸು ಮಾಡಿದ್ದಾರೆ. ಹೊರ ದೇಶಕ್ಕೆ ಹೋದರೆ ಮರಳಿ ಬರುವುದಿಲ್ಲ ಎಂಬ ಪರಿಸ್ಥಿತಿ ಈಗಿಲ್ಲ. ಸಾಕಷ್ಟು ಬದಲಾಗಿದೆ. ಇಲ್ಲಿ ಸಿಎಸ್‍ಆರ್ ನಿಧಿ ಹಣ ಅಭಿವೃದ್ಧಿಗೆ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಅನಿವಾಸಿ ಭಾರತೀಯರ ಸಮಿತಿಯನ್ನು ರಚಿಸಿದ್ದು, ಉಪಾಧ್ಯಕ್ಷರಾಗಿ ಆರತಿ ಕೃಷ್ಣ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

15 ರಾಷ್ಟ್ರಗಳಲ್ಲಿ ಅನಿವಾಸಿ ಕನ್ನಡಿಗರು:ಇದಕ್ಕೂ ಮುನ್ನ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಾತನಾಡಿ, ವಿಧಾನಸಭೆಯ ಕಾರ್ಯಕಲಾಪವನ್ನು ನಮ್ಮ ವಿಶೇಷ ಅತಿಥಿಗಳಾಗಿ ರೈತರು, ಪೌರಕಾರ್ಮಿಕರು, ವಿಶೇಷ ಚೇತನರು, ತೃತೀಯ ಲಿಂಗಿಗಳು ವೀಕ್ಷಣೆ ಮಾಡುತ್ತಿದ್ದಾರೆ. ಇಂದು ಸಭಾಧ್ಯಕ್ಷರ ಗ್ಯಾಲರಿಯಲ್ಲಿ 15 ವಿವಿಧ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರು ವೀಕ್ಷಣೆ ಮಾಡುತ್ತಿದ್ದಾರೆ. ಅವರನ್ನು ಎಲ್ಲ ಶಾಸಕರು, ಸರ್ಕಾರದ ಪರವಾಗಿ ಸ್ವಾಗತಿಸುವುದಾಗಿ ಹೇಳಿದರು.

ವ್ಯಾಪಾರ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗೆ ವಿದೇಶಕ್ಕೆ ತೆರಳಿ ಅಲ್ಲಿ ನೆಲೆಸಿರುವ ಕನ್ನಡಿಗರು, ನಮ್ಮ ಸಂಸ್ಕೃತಿ, ಆಚಾರ, ವಿಚಾರವನ್ನು ಮರೆಯದೆ ಆಯಾ ರಾಷ್ಟ್ರಗಳಲ್ಲಿ ಗಳಿಸಿದ ಆದಾಯದ ಒಂದು ಪಾಲನ್ನು ನಮ್ಮ ಸಮಾಜದ ಅಭಿವೃದ್ಧಿಗೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ನೀಡುವಲ್ಲಿ ಹಾಗೂ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರು ಪರೋಕ್ಷವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಅಧಿವೇಶನ ವೀಕ್ಷಣೆಗೆ ಅವಕಾಶ:ನಂತರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅನಿವಾಸಿ ಭಾರತೀಯ ಕನ್ನಡಿಗರು ಅಧಿವೇಶನ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರು ಅತಿ ಹೆಚ್ಚು ವಿದೇಶದಲ್ಲಿ ನೆಲೆಸಿದ್ದು, ಅಲ್ಲಿ ತಮ್ಮದೇ ಆದ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಆದರೂ ತಮ್ಮ ಊರಿನ ಸಂಪ್ರದಾಯ, ಸಂಬಂಧವನ್ನು ಮರೆತಿಲ್ಲ. ಎಲ್ಲ ಜಾತಿ ಧರ್ಮೀಯರು ಹೋಗಿದ್ದಾರೆ. ಅವರೊಂದಿಗೆ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಬೇಕು. ನಮ್ಮಲ್ಲಿನ ಹೂಡಿಕೆಯಲ್ಲೂ ಸಹಕಾರಿಯಾಗಲಿದೆ. ರಾಜಕೀಯ, ಸಾಮಾಜಿಕ, ಕೈಗಾರಿಕೆ ವಲಯದಲ್ಲೂ ದೊಡ್ಡ ಮಟ್ಟದಲ್ಲಿ ಹೊರದೇಶದಲ್ಲಿ ಸಾಧನೆ ಮಾಡಿದ್ದಾರೆ ಎಂದ ಹೇಳಿದರು.

ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಬಹಳ ಹಿಂದಿನಿಂದಲೂ ವಿದೇಶಗಳಿಗೆ ಹೋಗುವ ಪರಿಪಾಠವಿದೆ. ಜಗತ್ತಿನ ಎಲ್ಲೆಡೆ ಭಾರತೀಯ ಸಂಸ್ಕೃತಿಯ ಕುರುಹುಗಳಿವೆ. ಅನಿವಾಸಿ ಭಾರತೀಯರು ತವರಿಗೆ ಹೆಮ್ಮೆ ತರುವ ಕೆಲಸವನ್ನು ಮಾಡಿದ್ದಾರೆ. ಅವರೊಂದಿಗೆ ಹೆಚ್ಚು ಸಂಪರ್ಕ ಹೊಂದುವುದರಿಂದ ರಾಜ್ಯದ ಅಭಿವೃದ್ಧಿಗೂ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಮುನ್ನಡೆಸುವ ರೀತಿ ಭಾರತೀಯರು ವಿದೇಶಗಳಲ್ಲೂ ಹೆಮ್ಮೆ ಪಡುವಂತ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಹೇಳಿದರು.

ಇದನ್ನೂಓದಿ:ಪಿಎಸ್​ಐ ಅಮಾನತುಗೊಳಿಸಿದ್ದೇವೆ, ಸದನಕ್ಕೆ ಮಾಹಿತಿ ನೀಡಿದ ಗೃಹ ಸಚಿವರು: ರಾಮನಗರದಲ್ಲಿ ವಕೀಲರ ವಿಜಯೋತ್ಸವ

ABOUT THE AUTHOR

...view details