ಬೆಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಗಳು ವೀಣಾ ನಿರ್ದೇಶಕರಾಗಿರುವ ಎಕ್ಸಾಲಾಜಿಕ್ ಸಲೂಷನ್ಸ್ ವಿರುದ್ಧದ ತನಿಖೆಗೆ ಆದೇಶಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತಮ್ಮ ಕಂಪನಿಯ ವಿರುದ್ಧ ತನಿಖೆ ನಡೆಸುವಂತೆ ಗಂಭೀರ ವಂಚನೆ ತನಿಖಾ ಅಧಿಕಾರಿಗಳಿಗೆ (Serious Fraud Investigation Office) ಸೂಚನೆ ನೀಡಿದ್ದ ಕೇಂದ್ರದ ಕ್ರಮ ಪ್ರಶ್ನಿಸಿ ವೀಣಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿತು.
ಅಲ್ಲದೆ, ತಂತ್ರಜ್ಞಾನದ ಬೆಳವಣಿಗೆಯಾಗುತ್ತಿದ್ದಂತೆ ಆರ್ಥಿಕ ಅಪರಾಧಗಳು ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಬೆದರಿಕೆಯಾಗಿ ಮಾರ್ಪಟ್ಟಿದೆ ಎಂದು ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಅಂತಹ ಅಪರಾಧಗಳ ಸ್ವರೂಪ ಮತ್ತು ಅದರಲ್ಲಿ ಭಾಗಿಯಾದ ವ್ಯಕ್ತಿಗಳ ಪಾತ್ರ ಪತ್ತೆ ಹಚ್ಚುವುದು ಹಾಗೂ ಅರ್ಥ ಮಾಡಿಕೊಳ್ಳುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ. ಜೊತೆಗೆ, ಪ್ರಸಕ್ತ ಪ್ರಕರಣದಲ್ಲಿ ಎಸ್‌ಎಫ್‌ಐಒನಂತಹ ಸಂಸ್ಥೆಗಳು ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರ ಕಂಪನಿ (ವೀನಾ ನಿರ್ದೇಶಕರಾಗಿರುವ) ಮತ್ತು ಕೇರಳ ರಾಜ್ಯ ಕೈಗಾರಿಕಾ ನಿಗಮ ಹಾಗೂ ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ಸ್ ಲಿಮಿಟೆಡ್ ನಡುವೆ ಈಗಾಗಲೇ ಕಂಪನಿಗಳ ರಿಜಿಸ್ಟ್ರಾರ್ ಅವರು ಕಂಪನಿ ಕಾಯಿದೆ ಸೆಕ್ಷನ್ 210ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅರ್ಜಿದಾರರೇ ಹೇಳಿದ್ದಾರೆ. ಇಂತಹ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸೆಕ್ಷನ್ 212ರ (ಎಸ್‌ಎಫ್‌ಐಒ) ಅಡಿಯಲ್ಲಿ ತನಿಖೆಗೆ ಆದೇಶಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿರಲಿದೆ. ಜೊತೆಗೆ, ಈ ಸೆಕ್ಷನ್ ಅನ್ನು ಶಾಸನಬದ್ಧವಾಗಿಯೇ ಜಾರಿ ಮಾಡಲಾಗಿದೆ. ಆದರೆ, ಸೆಕ್ಷನ್ 210ರ ಅಡಿಯಲ್ಲಿ ತನಿಖೆ ನಡೆಸುತ್ತಿದ್ದು, ಅಂತಿಮ ವರದಿ ಸಲ್ಲಿಸುವುದಕ್ಕೂ ಮುನ್ನ 212ರ ಅಡಿಯಲ್ಲಿ ತನಿಖೆಗೆ ಆದೇಶಿಸಬಹುದಾಗಿದೆ ಎಂದು ಪೀಠ ಹೇಳಿದೆ.
ಅಲ್ಲದೆ, ಕಂಪನಿ ಕಾಯಿದೆ ಸೆಕ್ಷನ್ 210ರ ಅಡಿಯಲ್ಲಿ ತನಿಖೆ ನಡೆಯುತ್ತಿದ್ದು, ಅದೇ ಕಾಯಿದೆಯ ಸೆಕ್ಷನ್ 212ರಂತೆ ವಹಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಕಂಪನಿಯ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚುವುದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ. ಅಂತಹ ಅಧಿಕಾರವನ್ನು ನ್ಯಾಯಾಲಯ ಮೊಟಕುಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ತನಿಖೆ ವೇಳೆ ಕಂಡುಬಂದ ಅಂಶಗಳ ಅಡಿಯಲ್ಲಿನ ಕಾನೂನು ಪ್ರಕಾರವಾಗಿಯೇ ಸಾರ್ವಜನಿಕ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರ ಎಸ್‌ಎಫ್‌ಐಒ ತನಿಖೆಗೆ ಆದೇಶಿಸಿದೆ. ಆದರೆ, ಕಾಯಿದೆಯ ಉಲ್ಲಂಘಿಸಿ ತನಿಖೆಗೆ ಆದೇಶಿಸಿದಾಗ ಮಾತ್ರ ನ್ಯಾಯಾಲಯ ತನ್ನ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಕ್ರಮ ಸರಿಯಾಗಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.