ಬೆಂಗಳೂರು:ಸಿಇಟಿ-2024 ನೋಂದಣಿಗೆ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಣೆ ಮಾಡಿ ಆದೇಶಿಸಿದೆ. ಆನ್ಲೈನ್ ಅರ್ಜಿ ಸಲ್ಲಿಸದೇ ಇರುವ ಹಾಗೂ ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ 2024ರ ಏಪ್ರಿಲ್ 18 ಮತ್ತು 19 ರಂದು ನಡೆಸಲಾಗುವ ಸಿಇಟಿ-2024 ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 20ರ ರಾತ್ರಿ 11.59ರ ವರೆಗೆ ಹಾಗೂ ಶುಲ್ಕ ಪಾವತಿಗೆ ಫೆಬ್ರವರಿ 23ರ ಸಂಜೆ 5.30ರ ವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಮೂಲಕ ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ-24) ನಡೆಸುವ ದಿನಾಂಕವನ್ನು ಎರಡು ದಿನಗಳ ಮಟ್ಟಿಗೆ ಹಿಂದೂಡಲಾಗಿತ್ತು. ಅದರ ಪ್ರಕಾರ ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪತ್ರಿಕಾ ಪ್ರಕಟಣೆ ನೀಡಿ, ಏಪ್ರಿಲ್ 21ರಂದು ಎನ್ಡಿಎ ಪರೀಕ್ಷೆ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು.
ಹೆಚ್ಚು ಬೋರ್ಡ್ಗಳಲ್ಲಿ ಓದಿ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಪ್ಪಾಗಿ ನೀಡಿದ್ದಲ್ಲಿ ಆತಂಕ ಪಡಬೇಕಾಗಿಲ್ಲ - ಕೆಇಎ: ಇತ್ತೀಚಿಗೆ, ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಬೋರ್ಡ್ಗಳಲ್ಲಿ ಓದಿದ್ದು, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಪ್ಪಾಗಿ ನೀಡಿದ್ದಲ್ಲಿ ಅದರಿಂದ ತೊಂದರೆಯೇನೂ ಆಗುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿತ್ತು. ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ಪ್ರಾಧಿಕಾರವು ಅಭ್ಯರ್ಥಿಗಳ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ನೋಂದಣಿ ಸಂಖ್ಯೆಯ (ರಿಜಿಸ್ಟರ್ಡ್ ನಂಬರ್) ಆಧಾರದ ಮೇಲೆ ಅಂಕಗಳ ವಿವರಗಳನ್ನು ಪಡೆದುಕೊಳ್ಳುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಶಿಕ್ಷಣ ಮಂಡಳಿ (ಬೋರ್ಡ್) ಬಗ್ಗೆ ಅರ್ಜಿಯಲ್ಲಿ ಅಕಸ್ಮಾತಾಗಿ ತಪ್ಪು ಮಾಡಿದ್ದರೂ ಅಭ್ಯಂತರವಿಲ್ಲ ಎಂದು ಅವರು ಹೇಳಿದ್ದರು.
ಶಾಲೆಗಳು ಅಭ್ಯರ್ಥಿಗಳಿಗೆ ಸ್ಯಾಟ್ಸ್ ನಂಬರ್ ಕೊಡದೇ ಇದ್ದರೂ ತೊಂದರೆ ಏನಿಲ್ಲ. ಹಾಗೆಯೇ, ಸ್ಯಾಟ್ಸ್ ಡೇಟಾದಲ್ಲಿ ವಿದ್ಯಾರ್ಥಿಗಳ ವ್ಯಾಸಂಗದ ವಿವರಕ್ಕೆ ಸಂಬಂಧಿಸಿದಂತೆ ಒಂದೇ ಬೋರ್ಡಿನ ಹೆಸರಿದ್ದರೂ ಆತಂಕಕ್ಕೆ ಒಳಬೇಕಾಗಿಲ್ಲ. ಜೊತೆಗೆ, 2016-17ನೇ ಶೈಕ್ಷಣಿಕ ಸಾಲಿಗಿಂತ ಮೊದಲು ಸಿಬಿಎಸ್ಇ/ಸಿಐಎಸ್ಸಿಇ/ರಾಜ್ಯ ಶಿಕ್ಷಣ ಮಂಡಳಿಗಳಲ್ಲಿ 10ನೇ ತರಗತಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಸ್ಯಾಟ್ಸ್ ನಂಬರ್ ಬಗ್ಗೆ ಚಿಂತಿಸದೆ, ಸಿಇಟಿ ಅರ್ಜಿ ತುಂಬಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ:ಕನ್ನಡ ಬೋರ್ಡ್ ಕಡ್ಡಾಯ ಸುಗ್ರೀವಾಜ್ಞೆ ರಾಜ್ಯಪಾಲರಿಂದ ವಾಪಸ್: ಅಧಿವೇಶನದಲ್ಲಿ ಅನುಮೋದನೆ ಎಂದ ಡಿಸಿಎಂ