ಬೆಂಗಳೂರು:ಕಳೆದ ಡಿಸೆಂಬರ್ ತಿಂಗಳಲ್ಲಿ 384 ಹುದ್ದೆಗಳ ಕರ್ನಾಟಕ ಆಡಳಿತಾತ್ಮಕ ಸೇವೆ (ಕೆಎಎಸ್) ಅಧಿಕಾರಿಗಳ ನೇಮಕಕ್ಕೆ ನಡೆಸಿದ ಪೂರ್ವಭಾವಿ ಮರು ಪರೀಕ್ಷೆಯ ಫಲಿತಾಂಶ ಪ್ರಕಟಣೆಗಿದ್ದ ಅಡ್ಡಿ ನಿವಾರಣೆಯಾಗಿದ್ದು, ಕರ್ನಾಟಕ ಆಡಳಿತ ನ್ಯಾಯಮಂಡಳಿಯು (ಕೆಎಟಿ) ನೇಮಕ ಪ್ರಕ್ರಿಯೆ ಮುಂದುವರೆಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಅನುಮತಿ ನೀಡಿದೆ.
ಕೃಷ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಮತ್ತು ಆಡಳಿತ ಸದಸ್ಯೆ ಡಾ.ಅಮಿತಾ ಪ್ರಸಾದ್ ಅವರಿದ್ದ ಕೆಎಟಿ ನ್ಯಾಯಪೀಠ ಈ ಆದೇಶ ನೀಡಿದೆ.
ಕಾನೂನಿನ ಪ್ರಕಾರ ಆಯ್ಕೆ ಪ್ರಕ್ರಿಯೆಯನ್ನು ಮುಂದುವರೆಸಲು ಕೆಪಿಎಸ್‌ಸಿಗೆ ನಿರ್ದೇಶನ ನೀಡುತ್ತಿದ್ದೇವೆ ಮತ್ತು ಅರ್ಜಿದಾರರಿಗೆ ಯಾವುದೇ ತೊಂದರೆಗಳಿದ್ದರೆ, ಮುಂದಿನ ವಿಚಾರಣೆಯ ದಿನಾಂಕದಂದು ಅದನ್ನು ಸಲ್ಲಿಸಲು ಸ್ವತಂತ್ರರಿದ್ದಾರೆ ಎಂದು ತಿಳಿಸಿ ವಿಚಾರಣೆಯನ್ನು ಮಾರ್ಚ್ 66ಕ್ಕೆ ಮುಂದೂಡಿತು.
ಕಳೆದ ವಿಚಾರಣೆ ವೇಳೆ ನ್ಯಾಯಮಂಡಳಿ, ಪ್ರತಿವಾದಿ ಕೆಪಿಎಸ್‌ಸಿಯ ಅಭಿಪ್ರಾಯ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು. ಆದರೆ, ಸರ್ಕಾರ ಮತ್ತು ಕೆಪಿಎಸ್‌ಸಿ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿತು. ಅಲ್ಲದೆ, ಮುಂದಿನ ವಿಚಾರಣೆವರೆಗೆ ಪರೀಕ್ಷೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೆಪಿಎಸ್‌ಸಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ''ಪೂರ್ವಭಾವಿ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆಯ ಅನುವಾದದಲ್ಲಿ ಮತ್ತೆ ಲೋಪಗಳಾಗಿವೆ. ಇದರಿಂದ ಕನ್ನಡ ಮಾಧ್ಯಮದ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಪರೀಕ್ಷೆಯನ್ನು ರದ್ದು ಮಾಡಿ ಹೊಸದಾಗಿ ನಡೆಸಲು ನಿರ್ದೇಶನ ನೀಡಬೇಕು. ಅಲ್ಲದೆ, ಮಧ್ಯಂತರ ಕ್ರಮವಾಗಿ ಫಲಿತಾಂಶ ಪ್ರಕಟಣೆಗೆ ತಡೆ ನೀಡಬೇಕು'' ಎಂದು ನ್ಯಾಯಪೀಠಕ್ಕೆ ಕೋರಿದ್ದರು.
ಕೆಪಿಎಸ್‌ಸಿ ಪರ ಹಾಜರಾದ ಹಿರಿಯ ವಕೀಲ ರೂಬೆನ್ ಜಾಕೋಬ್, ''ಮರು ಪರೀಕ್ಷೆಯನ್ನು ಡಿ.29ರಂದು ನಡೆಸಲಾಗಿದ್ದು, ತಾತ್ಕಾಲಿಕ ಕೀ ಉತ್ತರಗಳನ್ನು ಜ.15ರಂದು ಪ್ರಕಟಿಸಲಾಗಿದೆ. ಯಾವುದಾದರೂ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು'' ಎಂದು ಪೀಠಕ್ಕೆ ವಿವರಿಸಿದ್ದರು.
ಇದನ್ನೂ ಓದಿ:ರಾಜ್ಯ ಮಾಹಿತಿ ಆಯುಕ್ತರ ನೇಮಕ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ