ಹುಬ್ಬಳ್ಳಿ: ಇಂದು ಹುಬ್ಬಳ್ಳಿಯ ಶಿವನ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ, ಅಭಿಷೇಕ, ಭಜನೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಹಾ ಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ.
ಕ್ಷಮತಾ ಸಂಸ್ಥೆ ಮತ್ತು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರ ವತಿಯಿಂದ ದೇಶಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಕಾಶಿ ವಿಶ್ವನಾಥ ಮಂದಿರದ ಮಾದರಿ ನಿರ್ಮಿಸಲಾಗಿದ್ದು, ಜನರು ಹುಬ್ಬಳ್ಳಿಯಲ್ಲೇ ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಿದ್ದಾರೆ. ಶಿವರಾತ್ರಿ ಪ್ರಯುಕ್ತ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲೇ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವುದು ವಿಶೇಷ.
ಭಕ್ತರಾದ ಚಂದ್ರಶೇಖರ ಬೆಳವಡಿ 'ಈಟಿವಿ ಭಾರತ್' ಜೊತೆ ಮಾತನಾಡಿ, "ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಕಾಶಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಿದ್ದಾರೆ ಎಂಬುದು ಪ್ರಪಂಚಕ್ಕೆ ಗೊತ್ತಿದೆ. ಅಂಥ ಕಾಶಿ ವಿಶ್ವನಾಥನ ದರ್ಶನವನ್ನು ಪ್ರಲ್ಹಾದ್ ಜೋಶಿಯವರು ಹುಬ್ಬಳ್ಳಿಯಲ್ಲಿ ಮಾಡಿಸಿದ್ದಾರೆ. ಇದರಿಂದ ಇಡೀ ಹುಬ್ಬಳ್ಳಿಯ ಜನತೆ ವಿಶ್ವನಾಥನ ದರ್ಶನ ಪಡೆದು ಪುನೀತರಾಗಿದ್ದಾರೆ. ಆ ಕಾಶಿಗೂ ಈ ಕಾಶಿಗೂ ಏನೂ ವ್ಯತ್ಯಾಸವಿಲ್ಲ. ತದ್ರೂಪವಾಗಿ ಮಾಡಿಸಿದ್ದಾರೆ" ಎಂದರು.
ಮತ್ತೋರ್ವ ಭಕ್ತರಾದ ವಿಜಯಾ ಮಾತನಾಡಿ, "ಕಾಶಿ ವಿಶ್ವನಾಥನ ದರ್ಶನ ಮಾಡಲು ಕಾಶಿಗೆ ಹೋಗಬೇಕು. ಆದರೆ ಇಲ್ಲಿಯೇ ದರ್ಶನ ಪಡೆದಿದ್ದಕ್ಕೆ ತುಂಬಾ ಖುಷಿಯಾಯಿತು. ವಯಸ್ಸಾದವರನ್ನು ಕಾಶಿಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಇಲ್ಲಿಯೇ ದರ್ಶನ ಮಾಡಿಸಬಹುದು" ಎಂದು ಹೇಳಿದರು.