ಬೆಂಗಳೂರು:ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆಯ ಜೊತೆಗೆ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ. ಬುಧವಾರ ಪ್ರಕಟವಾದ P- Marq ಮತದಾನೋತ್ತರ ಸಮೀಕ್ಷೆಯ ಪ್ರಕಾರ ಎನ್ಡಿಎ ಕೂಟ ಮುನ್ನಡೆ ಸಾಧಿಸಿದ್ದಾಗಿ ಹೇಳಿವೆ. ನವೆಂಬರ್ 23 ರಂದು ನಿಖರ ಫಲಿತಾಂಶ ಹೊರಬೀಳಲಿದೆ.
ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿಯ ಶಿಗ್ಗಾಂವಿ, ಬಳ್ಳಾರಿಯ ಸಂಡೂರು ಕ್ಷೇತ್ರದ ಉಪಚುನಾವಣೆಗೆ ನವೆಂಬರ್ 13 ರಂದು ಮತದಾನವಾಗಿತ್ತು. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎನ್ಡಿಎ ಕೂಟದ ಮಿತ್ರ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಯು ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿವೆ.
ಪಿ-ಮಾರ್ಕ್ ಎಂಬ ಸಂಸ್ಥೆಯ ಪ್ರಕಾರ, ಕರ್ನಾಟಕದ ಮೂರು ಸ್ಥಾನಗಳಲ್ಲಿ ಎನ್ಡಿಎ 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಮಾಲ್ ಮಾಡಲಿವೆ. ಸಂಡೂರು ಕ್ಷೇತ್ರ ಯಥಾವತ್ತಾಗಿ ಕಾಂಗ್ರೆಸ್ ಪಾಲಾಗಲಿದೆ ಎಂದು ಭವಿಷ್ಯ ನುಡಿದಿದೆ.
ಕಠಿಣ ಪೈಪೋಟಿ:ಜೆಡಿಎಸ್ ಪಕ್ಷವು ಚನ್ನಪಟ್ಟಣವನ್ನು ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿತ್ತು. ಇತ್ತ ಕಾಂಗ್ರೆಸ್ ಕೂಡ ಗೆಲ್ಲಲೇಬೇಕೆಂದು ತೀವ್ರ ಪೈಪೋಟಿ ಒಡ್ಡಿದೆ. ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿದರೆ, ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗಿದ್ದಾರೆ. ಪ್ರಚಾರದ ವೇಳೆ ಭಾರೀ ವಾಕ್ಸಮರ ಉಂಟಾಗಿದ್ದು, ಕೆಲ ವಿವಾದಗಳು ಎದ್ದಿವೆ.
ಇತ್ತ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ತೆರವಾಗಿದ್ದ ಹಾವೇರಿಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ ಎಂದು ಹೇಳಲಾಗಿದೆ. ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣದಲ್ಲಿದ್ದರೆ, ಕಾಂಗ್ರೆಸ್ನಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಸ್ಪರ್ಧೆ ಒಡ್ಡಿದ್ದಾರೆ. ಕಾಂಗ್ರೆಸ್ನಲ್ಲಿ ಭಿನ್ನಮತ ಉಂಟಾಗಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ಕೊನೆಯಲ್ಲಿ ನಾಮಪತ್ರ ಸಲ್ಲಿಸಿ ಮತ್ತೆ ವಾಪಸ್ ಪಡೆದಿದ್ದರು. ಇದು ಚುನಾವಣೆಯಲ್ಲಿ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಫಲಿತಾಂಶದ ಬಳಿಕ ತಿಳಿಯಲಿದೆ.
ಇನ್ನೂ, ಕಾಂಗ್ರೆಸ್ನ ಕ್ಷೇತ್ರವಾದ ಸಂಡೂರಿನಲ್ಲಿ ಗೆಲ್ಲುವ ವಿಶ್ವಾಸ ಆ ಪಕ್ಷಕ್ಕಿದೆ. ಅನ್ನಪೂರ್ಣ ತುಕಾರಾಂ ಅವರಿಗೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಸವಾಲು ಒಡ್ಡಿದ್ದಾರೆ. ಜಿದ್ದಾಜಿದ್ದಿನಲ್ಲಿ ಯಾರು ಜಯ ಸಾಧಿಸಲಿದ್ದಾರೆ ಎಂಬುದು ಇನ್ನು ಮೂರು ದಿನಗಳಲ್ಲಿ ಬಯಲಾಗಲಿದೆ.
ಇದನ್ನೂ ಓದಿ:ಮಹಾರಾಷ್ಟ್ರ ಎಕ್ಸಿಟ್ ಪೋಲ್: ಮಹಾಯುತಿ ಮೈತ್ರಿಯತ್ತ ಜನರ ಒಲವು, ಜಾರ್ಖಂಡ್ನಲ್ಲೂ ಬಿಜೆಪಿ ಮುನ್ನಡೆ