ಬೆಂಗಳೂರು: ಸಚಿವ ಬಿ.ನಾಗೇಂದ್ರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. (ETV Bharat) ಬೆಂಗಳೂರು:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಯಾಕೆ ತಳುಕು ಹಾಕಲಾಗಿದೆ ಎಂಬುವುದೇ ನನಗೆ ಗೊತ್ತಿಲ್ಲ. ಈ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೇಳಿದರು.
ವಿಧಾನಸೌಧದಲ್ಲಿ ತುರ್ತು ಮಾಧ್ಯಮಗೋಷ್ಟಿಯದ್ದೇಶಿಸಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಇದರ ಆಧಾರದ ಮೇಲೆ ನಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಹ ಮಾಹಿತಿ ಪಡೆದುಕೊಂಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ಸಹಿಯನ್ನು ವಿಧಿವಿಜ್ಞಾನ ಪ್ರಾಯೋಗಾಲಯಕ್ಕೆ (ಎಫ್ಎಸ್ಎಲ್) ರವಾನಿಸಲಾಗಿದೆ. ಈ ಸಹಿ ಎಂಡಿ ಅವರದ್ದೇ ಎಂದು ದೃಢಪಟ್ಟರೆ, ಅವರನ್ನೂ ಕೂಡ ವಜಾ ಮಾಡುತ್ತೇವೆ. ಇದರಲ್ಲಿ ಯಾರ ಕೈವಾಡ ಇದೆ ಎಂಬುವುದನ್ನು ಪತ್ತೆ ಹೆಚ್ಚುತ್ತೇವೆ. ಇಂದು ಬೆಳಗ್ಗೆಯಿಂದಲೇ ಸಿಐಡಿ ತನಿಖೆ ಮಾಡುತ್ತಿದೆ. ಎಂಡಿ ಸೇರಿದಂತೆ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಅಧಿಕಾರಿ ಆತ್ಮಹತ್ಯೆ ಸಂಬಂಧ ರಾಜೀನಾಮೆಗೆ ಒತ್ತಡ ಕೇಳಿ ಬರುತ್ತಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ಬಿಜೆಪಿಯವರ ಪ್ರಕಾರ, ನನ್ನ ರಾಜೀನಾಮೆ ಕೇಳುವುದು ಸರಿ ಇರಬಹುದು. ಆದರೆ, ನನ್ನ ಹೆಸರು ಯಾಕೆ ತಳುಕು ಹಾಕಿದ್ದಾರೆ ಎಂಬುವುದೇ ನನಗೆ ಗೊತ್ತಿಲ್ಲ. ಇದು ನನ್ನ ವ್ಯಾಪ್ತಿಯೇ ಇಲ್ಲ. ಈ ಬಗ್ಗೆ ಸಿಐಡಿಗೆ ತನಿಖೆ ವಹಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಅಧಿಕಾರಿಗಳು ಶಾಮೀಲು ಮಾಹಿತಿ:ಎಲ್ಲ ಹಣ ದುರುಪಯೋಗ ಆಗಿದೆ ಅಂತಾ ಮಾಧ್ಯಮಗಳಲ್ಲಿ ಬಂದಿದೆ. ಇದರ ಬಳಿಕ ನಾನು ಮಾಹಿತಿ ಪಡೆದುಕೊಂಡೆ. ಹಣ ಯಾವ ರೀತಿ ದುರುಪಯೋಗ ಆಗಿದೆ ಅಂತಾ ಪರಿಶೀಲನೆ ಮಾಡುತ್ತಿದ್ದೇವೆ. ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ಹಣ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಮಾಡಿದ್ದು ಕೂಡ ಎಂಡಿ ಗಮನಕ್ಕೆ ಬಂದಿಲ್ಲ. ಬ್ಯಾಂಕ್ನವರು ಹಣದ ಮೊತ್ತವನ್ನು ನಮ್ಮ ನಿಗಮದ ಖಾತೆಗೆ ಮರು ವರ್ಗಾವಣೆ ಮಾಡಲು ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ. ಬ್ಯಾಂಕ್ ಅಧಿಕಾರಿಗಳು ಕೂಡ ನಮ್ಮ ಗಮನಕ್ಕೆ ತಂದಿಲ್ಲ ಅಂತಾ ಎಂಡಿ ಪದ್ಮನಾಭನ್ ಹೇಳಿದ್ದಾರೆ. ಸುಮಾರು 87 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು. ಈಗಾಗಲೇ 23 ರೂ. ಕೋಟಿ ರಿಕವರಿ ಆಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇವೆ. ಉಳಿದ 50 ಕೋಟಿ ರೂ. ಕೂಡ ಇಂದು ಸಂಜೆಯ ಒಳಗೆ ವಾಪಸ್ ರಿಕವರಿ ಮಾಡುತ್ತಿದ್ದೇವೆ. ಬ್ಯಾಂಕ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾದಂತೆ ಕಾಣುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬ್ಯಾಂಕ್ ಅಧಿಕಾರಿಗಳಿಗೆ ಗಡುವು:ಈ ಕುರಿತುನಿಗಮದ ಎಂಡಿ ದೂರು ಕೊಟ್ಟಿದ್ದಾರೆ. ಇಂದು ಸಂಜೆಯೊಳಗೆ ನಿಗಮದ ಖಾತೆಗೆ ಅಷ್ಟೂ ಹಣ ವಾಪಸ್ ಬರಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದೇವೆ. ಗಡುವು ಮೀರಿದರೆ ಬ್ಯಾಂಕ್ನ ಹಿರಿಯ ಅಧಿಕಾರಿಗಳ ಮೇಲೂ ಕೂಡ ಎಫ್ಐಆರ್ ದಾಖಲು ಮಾಡುತ್ತೇವೆ. ಇಷ್ಟು ದೊಡ್ಡ ಜವಾಬ್ದಾರಿ ಸಣ್ಣ ಅಧಿಕಾರಿಗೆ ಹೇಗೆ ನೀಡಲಾಯಿತು?. ಯಾರದಾದರೂ ಒತ್ತಡ ಇತ್ತಾ ಎಂಬುದರ ತನಿಖೆ ಕೂಡ ನಡೆಯುತ್ತಿದೆ ಎಂದು ವಿವರಿಸಿದರು.
ನಿಗಮದ ಎಂಡಿ ಬಗ್ಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ನಿಜವಾಗಿಯೂ ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಚುನಾವಣಾ ನೀತಿ ಸಂಹಿತೆ ಇದ್ದಾಗ ಕಾರಣ ಯಾವುದೇ ಸಭೆ ಮಾಡಿಲ್ಲ. ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆಗಬೇಕಾದರೆ, ಬೋರ್ಡ್ ಮೀಟಿಂಗ್ ಮಾಡಬೇಕು. ಯಾವುದೇ ಬೋರ್ಡ್ ಮೀಟಿಂಗ್ ಕೂಡ ನಡೆದಿಲ್ಲ. ಬ್ಯಾಂಕ್ ಅಧಿಕಾರಿಗಳು ಕೂಡ ಸಬ್ ಅಕೌಂಟ್ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ ಕೂಡ ಇದನ್ನು ಎಂಡಿ ಗಮನಕ್ಕೆ ತಂದಿಲ್ಲ. ಎಂಡಿ ಮೊಬೈಲ್ಗೂ ಕೂಡ ನಗದು ವಹಿವಾಟಿನ ಮೆಸೇಜ್ ಬಂದಿಲ್ಲ ಅಂತಿದ್ದಾರೆ. ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಿಐಡಿ ವರದಿ ಆಧರಿಸಿ ಎಂಡಿ ಸೇರಿದಂತೆ ಎಲ್ಲರ ಮೇಲೆ ಕ್ರಮ ಆಗಲಿದೆ ಎಂದು ಸಚಿವ ನಾಗೇಂದ್ರ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಶಿವಮೊಗ್ಗ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ