ಬೆಂಗಳೂರು: ರಾಜ್ಯದಲ್ಲಿ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ದಿನ ಮತ್ತು ಫಲಿತಾಂಶ ದಿನಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಚುನಾವಣಾ ಆಯೋಗದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದೇ ವೇಳೆ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಪದಾರ್ಥಗಳ ವಿತರಣೆ ಮತ್ತು ಸೇವನೆಗೆ ಅಡ್ಡಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಆದೇಶಿಸಿದೆ.
ವಿಧಾನ ಪರಿಷತ್ ಚುನಾವಣೆ ನಡೆಯುವ ಮತ್ತು ಫಲಿತಾಂಶ ಪ್ರಕಟವಾಗುವ ದಿನ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಇದರ ವಿರುದ್ಧ ಮದ್ಯ ಮಾರಾಟ ಪರವಾನಗಿ ಹೊಂದಿರುವ ಕುಶಾಲ್ ರಾಜ್ ಎಂಬುವರು ಹೈಕೋರ್ಟ್ಗೆ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ಪೀಠವು ಅರ್ಜಿ ವಜಾಗೊಳಿಸಿದೆ. ಹೋಟೆಲ್ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಪದಾರ್ಥಗಳ ವಿತರಣೆಗೆ ಅಡ್ಡಿಪಡಿಸದಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಅಲ್ಲದೇ, ಚುನಾವಣಾಧಿಕಾರಿಯು ಮತದಾನದ ದಿನದಂದು ಮದ್ಯ ಮಾರಾಟ ಸೀಮಿತಗೊಳಿಸಿದ್ದರೂ, 'ಮತದಾನದ ದಿನಾಂಕ' ಎಂಬ ಪದವನ್ನು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 135 (ಸಿ)ರ ಪ್ರಕಾರ ಅರ್ಥೈಸಬೇಕಾಗುತ್ತದೆ. ಇದು ಮತದಾನದ 48 ಗಂಟೆಗಳ ಮೊದಲು ಮದ್ಯ ಮಾರಾಟ ಕಡ್ಡಾಯಗೊಳಿಸಿದೆ ಎಂದು ಪೀಠ ತಿಳಿಸಿದೆ.