ಬೆಂಗಳೂರು:ರಾಜ್ಯದ ಹಳೇ ಮೈಸೂರು ಪ್ರದೇಶದ ಹಿಡಿತ ಸಾಧಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಪೈಪೋಟಿ ಇದೆ. ಇದರ ನಡುವೆ 2024ರ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ತನಗಿನ್ನೂ ಗಟ್ಟಿ ನೆಲೆ ಇದೆ ಎಂಬ ಸಂದೇಶವನ್ನು ಜೆಡಿಎಸ್ ಗಟ್ಟಿಯಾಗಿಯೇ ರವಾನಿಸಿದೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಮೂರು ಕ್ಷೇತ್ರಗಳನ್ನು ಗಿಟ್ಟಿಸಿಕೊಂಡಿದ್ದ ಜೆಡಿಎಸ್ ಎರಡರಲ್ಲಿ ಗೆಲುವು ಸಾಧಿಸಿದೆ. ಜೊತೆಗೆ ಬಿಜೆಪಿಯ ಐದಾರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಾಗಿದೆ. ಇದು ಜೆಡಿಎಸ್‌ಗೆ ಹೊಸ ಚೈತನ್ಯ ತುಂಬಿದೆ. ಮೈತ್ರಿಯಿಂದ ಮುಂದಿನ ಚುನಾವಣೆಗಳಲ್ಲಿ ಹೆಚ್ಚು ಅನುಕೂಲವಾಗಬಹುದು ಎಂಬ ಆತ್ಮವಿಶ್ವಾಸ ಪಕ್ಷದ ನಾಯಕರಲ್ಲಿ ಮೂಡಿದೆ.
ಪ್ರಜ್ವಲ್ ಪ್ರಕರಣದಿಂದ ಕಂಗೆಟ್ಟಿದ್ದ ಜೆಡಿಎಸ್‌ಗೆ ಹೆಚ್.ಡಿ.ಕುಮಾರಸ್ವಾಮಿ ನಿರೀಕ್ಷಿತ ಗೆಲುವು ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಅನಿರೀಕ್ಷಿತ ಜಯ ಪಕ್ಷದಲ್ಲಿ ಉತ್ಸಾಹ ತುಂಬಿದೆ. ಮುಂದಿನ ಚುನಾವಣೆಗೆ ದಿಕ್ಕೂಚಿ ಎಂಬ ವಾತಾವರಣ ಸೃಷ್ಟಿಸಿದೆ. ರಾಜ್ಯದಲ್ಲಿ ಜೆಡಿಎಸ್ ಕತೆ ಮುಗಿಯಿತು ಎಂದು ಹೇಳುತ್ತಿದ್ದವರಿಗೆ ಈ ಫಲಿತಾಂಶ ಉತ್ತರ ಕೊಟ್ಟಿದೆ.
ಲೋಕಸಭೆ ಚುನಾವಣೆ ನಂತರ ಎದುರಾದ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಸಿವೆ. ಇದರ ಜೊತೆಗೆ ಮುಂಬರುವ ಬಿಬಿಎಂಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಮೈತ್ರಿ ಅಬಾಧಿತ ಎಂಬ ಸಂದೇಶವನ್ನು ಈ ಚುನಾವಣೆ ಕೊಟ್ಟಿದೆ.
ಗಟ್ಟಿ ನೆಲೆ ಕಂಡ ಹಳೇ ಮೈಸೂರು ಭಾಗ: ಮಂಡ್ಯ ಹಾಗೂ ಕೋಲಾರ ಕ್ಷೇತ್ರದ ಗೆಲುವು ಜೆಡಿಎಸ್ ಅಸ್ತಿತ್ವವನ್ನು ಸದೃಢಪಡಿಸಿವೆ. ಹಾಸನ ಪೆನ್‌ಡ್ರೈವ್ ಪ್ರಕರಣ ಮುಂದಿಟ್ಟು ಮೈತ್ರಿ ಮುರಿಯುವ ತಂತ್ರ ಫಲಿಸಲಿಲ್ಲ ಎಂಬ ಖುಷಿ ಜೆಡಿಎಸ್ನಲ್ಲಿ ನಿರ್ಮಾಣವಾಗಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ತನ್ನ ನೆಲೆ ಕಳೆದುಕೊಂಡಿಲ್ಲ ಎಂಬುದಕ್ಕೆ ಈ ಚುನಾವಣಾ ಫಲಿತಾಂಶ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.
ಹಿಡಿತ ಸಾಧಿಸಲು ಮುಂದಾಗಿದ್ದ ಕಾಂಗ್ರೆಸ್: ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹೆಚ್ಚು ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕಾಂಗ್ರೆಸ್ ಮಾತ್ರ ಗೆದ್ದಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯ ಸ್ಥಾನ ಗೆಲ್ಲಬೇಕೆಂಬ ಕಾರಣದಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ ರೂಪಿಸಿದ್ದರು.
ಇನ್ಮುಂದೆ ಒಕ್ಕಲಿಗರು ಜೆಡಿಎಸ್ ಜೊತೆ ಇಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸಲು ಮಂಡ್ಯದಲ್ಲಿ ಇಬ್ಬರೂ ನಾಯಕರು, ಬದ್ಧ ಪ್ರತಿಸ್ಪರ್ಧಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಒಡ್ಡಿದ್ದರು. ಆದರೆ, ಮಂಡ್ಯದ ಜೊತೆಗೆ ಮೈಸೂರು-ಕೊಡಗು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಡಿ.ಕೆ.ಶಿವಕುಮಾರ್ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದೆ.
ಐದಾರು ಕ್ಷೇತ್ರಗಳಲ್ಲಿ ಬಿಜೆಪಿಗೆ ಜೆಡಿಎಸ್ ಬೆನ್ನೆಲುಬು:ಈ ಬಾರಿಐದಾರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ಬೆನ್ನೆಲುಬಾಗಿ ನಿಂತಿದೆ. ಡಾ.ಸಿ.ಎನ್.ಮಂಜುನಾಥ್ ಅವರು ಡಿ.ಕೆ.ಸುರೇಶ್ ಅವರ ಕೋಟೆಯನ್ನು ಛಿದ್ರ ಮಾಡಿದ್ದಾರೆ. ಇದಕ್ಕೆ ಜೆಡಿಎಸ್ ಸಾಥ್ ಕೊಟ್ಟಿದೆ. ತುಮಕೂರು, ಮೈಸೂರು, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ಕೊಡುಗೆ ಮಹತ್ವದ್ದು ಎಂಬುದನ್ನು ಬಿಜೆಪಿ ನಾಯಕರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಟಫ್ ಫೈಟ್ ಕೊಡಲು ಕೈಜೋಡಿಸಿದ್ದು ಕೂಡ ತಾವು ಎಂದು ಜೆಡಿಎಸ್ ನಾಯಕರು ಬೆನ್ನುತಟ್ಟಿಕೊಳ್ಳುತ್ತಾರೆ. ಇದರಿಂದ ಪಕ್ಷ ಸಂಘಟನೆಗೆ ಇನ್ನಷ್ಟು ಬಲ ಬರಲಿದೆ ಎಂಬ ವಿಶ್ವಾಸ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರದ್ದಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡಿದ ಕಾರಣಕ್ಕೆ ಬಿಜೆಪಿಯ ತೇಜಸ್ವಿ ಸೂರ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಅದೇ ರೀತಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಸಹಕಾರ ನೀಡಿದಕ್ಕೆ ಧನ್ಯವಾದ ತಿಳಿಸಿದ್ದಾರೆ.
''ನನ್ನ ಗೆಲುವಿಗೆ ಬಿಜೆಪಿ ಎಷ್ಟು ಕಾರಣವೋ, ಜೆಡಿಎಸ್ ಸಹ ಅಷ್ಟೇ ಕಾರಣ. ನಾನು ತುಮಕೂರಿನಲ್ಲಿ ಸ್ಪರ್ಧಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾರಣ. ನಾನು ಮೂವತ್ತು ವರ್ಷಗಳ ಕಾಲ ದೇವೇಗೌಡರ ಗರಡಿಯಲ್ಲಿ ಪಳಗಿದ್ದ ಕಾರಣ, ಮೈತ್ರಿಯಲ್ಲಿ ಸಮನ್ವಯತೆ ಸಾಧಿಸುವಲ್ಲಿ ಯಶಸ್ವಿಯಾದೆ'' ಎಂದು ತುಮಕೂರು ಬಿಜೆಪಿ ನೂತನ ಸಂಸದ ವಿ.ಸೋಮಣ್ಣ ಹೇಳಿದ್ದಾರೆ.
ಇದನ್ನೂ ಓದಿ:ಹಳೆ ಮೈಸೂರು, ಕರಾವಳಿಯಲ್ಲಿ ಕಾಂಗ್ರೆಸ್ ಪರ ಅಲೆ ಸೃಷ್ಟಿಸದ ಗ್ಯಾರಂಟಿ; ಜೆಡಿಎಸ್-ಬಿಜೆಪಿ ಮೈತ್ರಿ ಜನಮನ್ನಣೆ ಗಳಿಸಿದ್ದೇಗೆ?