ಬೆಂಗಳೂರು:ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಾಜ್ಯ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಸ್ಥೆಯ ಒಕ್ಕೂಟ 2022ರಲ್ಲಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ದಂಡ ವಿಧಿಸುವುದಾಗಿ ಹೈಕೋರ್ಟ್ ಎಚ್ಚರಿಸಿತು.
ರಾಜ್ಯ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಸ್ಥೆಯ ಒಕ್ಕೂಟವು ಕಾಯಿದೆಯ ಸೆಕ್ಷನ್‌ಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಪೀಠ ಕಳೆದ ಬಾರಿಯೂ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ್ದೀರಿ. ಈಗ ಮತ್ತೆ ಕಾಲಾವಕಾಶ ಕೇಳುತ್ತಿದ್ದೀರಿ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿತು. ಜೊತೆಗೆ ಕೇಂದ್ರ ಸರ್ಕಾರ ಎಲ್ಲಾ ಪ್ರಕರಣಗಳಲ್ಲಿ ಕಾಲಾವಕಾಶ ಕೇಳುತ್ತಲೇ ಇರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.