ಬೆಂಗಳೂರು: ಜಕ್ಕೂರು ಏರೋ ಡ್ರಮ್‌ನಲ್ಲಿ ವಿಮಾನವನ್ನು ಎಡಕ್ಕೆ ತಿರುಗಿಸಿದ್ದ ಆರೋಪದಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ಪೈಲೆಟ್ ಒಬ್ಬರ ವಿರುದ್ಧ ದಾಖಲಾಗಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಪೈಲಟ್ ಆಕಾಶ್ ಜೈಸ್ವಾಲ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ವಿಮಾನ ಕಾಯಿದೆ ಸೆಕ್ಷನ್ 11ಎ ಅಡಿಯಲ್ಲಿ ಪೈಲಟ್ ವಿರುದ್ಧ ವಿಚಾರಣೆ ಪ್ರಾರಂಭಿಸಿದ್ದ ಕ್ರಮವನ್ನು ನ್ಯಾಯಪೀಠ ರದ್ದುಪಡಿಸಿ ಆದೇಶಿಸಿದೆ. ಅಲ್ಲದೆ, ನಾಗರಿಕ ವಿಮಾನಯಾನ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಹಾಗೂ ವಿಮಾನ ಅಪಘಾತಗಳ ತನಿಖಾ ಬ್ಯೂರೋಗಳು ಮಹಾನಿರ್ದೇಶಕರುಗಳು ಲಿಖಿತವಾಗಿ ನೀಡಿದ ದೂರಿನ ಮೇರೆಗೆ ಅಥವಾ ಪೂರ್ವಾನುಮತಿಯೊಂದಿಗೆ ವಿಚಾರಣಾ ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಪರಿಗಣಿಸಬಾರದು ಎಂಬುದಾಗಿ ವಿಮಾನ ಕಾಯ್ದೆಯ ಸೆಕ್ಷನ್ 12ರಲ್ಲಿ ತಿಳಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಸಿಆರ್‌ಪಿಸಿ ಅಡಿ ದೂರು ದಾಖಲಿಸುವುದು ಎಂದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಿಸಿದಂತೆ. ಹೀಗಾಗಿ ದೂರಿಗೆ ಸಂಬಂಧಿಸಿದಂತೆ ಪೂರ್ವಾನುಮತಿ ಇಲ್ಲ. ಅರ್ಜಿದಾರ ಪೈಲಟ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಈ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೆಗೆದುಕೊಂಡಿರುವ ಕಾಗ್ನಿಜೆನ್ಸ್‌ನ್ನು ರದ್ದುಪಡಿಸಲಾಗುತ್ತಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಪ್ರಕರಣ ದಾಖಲಿಸಿರುವುದು ಕಾನೂನು ವಿರುದ್ಧವಾಗಲಿದೆ. ಈ ಪ್ರಕರಣದ ವಿಚಾರಣೆ ಮುಂದುವರೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ಪೀಠ ಹೇಳಿದೆ.