ಬೆಂಗಳೂರು: ಕುಮಾರ ಕೃಪಾ ಈಸ್ಟ್ ಬಂಗಲೆಗಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಉಭಯ ನಾಯಕರ ಪ್ರತಿಷ್ಠೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೈರಾಣಾಗಬೇಕಾಗಿದೆ. ಪತ್ರ ವ್ಯವಹಾರಕ್ಕೆ ಸೀಮಿತವಾಗಿದ್ದ ವಿವಾದ ಇದೀಗ ಉಭಯ ನಾಯಕರ ನಡುವೆ ಟಾಕ್ ವಾರ್ಗೂ ಮುನ್ನುಡಿ ಬರೆದಿದೆ. ಅಷ್ಟಕ್ಕೂ ಈ ಬಂಗಲೆಗಾಗಿ ಯಾಕೆ ಡಿಮ್ಯಾಂಡ್?.
ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ವಿರೋಧ ಪಕ್ಷದ ನಾಯಕರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕುಮಾರಕೃಪಾ ಈಸ್ಟ್ ಬಂಗಲೆಯನ್ನು ಸಾಮಾನ್ಯವಾಗಿ ಪ್ರತಿಪಕ್ಷ ನಾಯಕರಿಗೆ ಹಂಚಿಕೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಬಿಟ್ಟರೆ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ ಹಂಚಿಕೆ ಮಾಡುವುದು ವಾಡಿಕೆ. ಆದರೆ ಈಗ ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್ಗೆ ಸರ್ಕಾರ ಈವರೆಗೂ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿಲ್ಲ. ಹಾಗಾಗಿ ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ 2023 ರ ನವೆಂಬರ್ನಲ್ಲಿ ಸರ್ಕಾರಕ್ಕೆ ಅಶೋಕ್ ಮೊದಲ ಪತ್ರ ಬರೆದಿದ್ದರು. ಬಳಿಕ 2024ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಮೂರನೇ ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಇದು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಮೂರಲ್ಲಿ ಒಂದು ಕೊಡಿ ಎಂದ ಅಶೋಕ್:ಕುಮಾರಕೃಪಾ ಪೂರ್ವ ನಿವಾಸ, ರೇಸ್ ವ್ಯೂವ್ ಕಾಟೇಜ್-1, ರೇಸ್ ವ್ಯೂವ್ ಕಾಟೇಜ್-2 ಈ ಮೂರರಲ್ಲಿ ಒಂದು ನಿವಾಸಕ್ಕೆ ಅಶೋಕ್ ಮನವಿ ಸಲ್ಲಿಸಿದ್ದಾರೆ. ಕುಮಾರಕೃಪ ನಿವಾಸ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಕೊಡಲಾಗಿದೆ. ರೇಸ್ ವ್ಯೂವ್ ಕಾಟೇಜ್-1 ಸಚಿವ ಎಂ.ಬಿ.ಪಾಟೀಲ್ ಮತ್ತು ರೇಸ್ ವ್ಯೂವ್ ಕಾಟೇಜ್-2 ನಿವಾಸದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿದ್ದಾರೆ. ಈಗ ವಿಪಕ್ಷ ನಾಯಕ ಅಶೋಕ್ ಅವರು ಕೇಳಿರುವ ಈ ನಿವಾಸಗಳು ಈಗ ಖಾಲಿ ಇಲ್ಲ.
ಆರ್.ಅಶೋಕ್ ಈಗ ಮೂರನೇ ಪತ್ರ ಬರೆಯುತ್ತಿದ್ದಂತೆ ಅಲರ್ಟ್ ಆದ ಡಿ.ಕೆ.ಶಿವಕುಮಾರ್, ನನ್ನನ್ನೇ ಕೇಳಿದ್ರೆ ನಾನೇ ಅಶೋಕ್ಗೆ ಮನೆ ಕೊಡಿಸುತ್ತಿದ್ದೆ ಅಂತಾ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೌಂಟರ್ ನೀಡಿದ ಅಶೋಕ್, ನಾನು ಡಿ.ಕೆ.ಶಿವಕುಮಾರ್ ಅವರ ಮನೆ ಕೇಳಿಲ್ಲ. ವಿರೋಧ ಪಕ್ಷ ನಾಯಕರ ಮನೆ ಕೇಳಿರೋದು. ಹಿಂದಿನಿಂದಲೂ ನಡೆದ ಪದ್ಧತಿ. ಸಿದ್ದರಾಮಯ್ಯ ಅವರಿಗೆ ನಮ್ಮ ಸರ್ಕಾರ ಇದ್ದಾಗ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಕೊಟ್ಟಿದ್ದೆವು. ಆದರೆ ಅವರು ಕುಮಾರಕೃಪಾ ಈಸ್ಟ್ ಮನೆಯೇ ಬೇಕೆಂದಿದ್ದರು. ಅಂದಿನ ಸ್ಪೀಕರ್ ಕಾಗೇರಿ ಅವರಿಗೆ ನೀಡಿದ್ದ ಆ ಮನೆಯನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದೆವು. ನನಗೆ ಅಲಾಟ್ ಆಗಿದ್ದ ಮನೆಯನ್ನು ಕಾಗೇರಿ ಅವರಿಗೆ ಬಿಟ್ಟುಕೊಟ್ಟಿದ್ದೆ. ನೀವು ಆ ಔದಾರ್ಯ ಯಾಕೆ ಮಾಡುತ್ತಿಲ್ಲ?. ಮಾಧ್ಯಮದವರನ್ನ ಭೇಟಿ ಮಾಡಲು, ಜನರನ್ನು ಭೇಟಿ ಮಾಡಲು ದೂರ ಬರಬೇಕು. ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಮನೆ ಕೊಡಲಿ. ನಾನು ಒಂದೇ ಮನೆ ಕೇಳಿಲ್ಲ. ಮೂರು ಮನೆಗಳಲ್ಲಿ ಒಂದು ಕೇಳಿದ್ದೇನೆ. ಮನೆ ಕೊಡದಿದ್ದರೂ ಸಂತೋಷ. ಮೂರು ಪತ್ರ ಬರೆದರೂ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ. ನಿಯಮದಲ್ಲಿ ಇರೋ ಪ್ರಕಾರ ನೀಡಿ ಎಂದು ಸರ್ಕಾರದ ವಿರುದ್ಧ ಹಾಗೂ ಡಿ.ಕೆ.ಶಿವಕುಮಾರ್ ನಡೆಯ ವಿರುದ್ಧ ಹರಿಹಾಯ್ದಿದ್ದರು.