ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ ಸೇರಿ 17,836 ಕೋಟಿ ರೂ ಹೂಡಿಕೆಗೆ ಅಸ್ತು: 27 ಸಾವಿರ ಉದ್ಯೋಗ ನಿರೀಕ್ಷೆ - karnataka investment

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅನುಮೋದನೆಗೊಂಡ ಯೋಜನೆಗಳ ಪೈಕಿ 8,220.05 ಕೋಟಿ ಮೊತ್ತದ 6 ಹೊಸ ಯೋಜನೆಗಳು ಮತ್ತು 9,615.85 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳು ಇವೆ.

Etv Bharat
Etv Bharat

By ETV Bharat Karnataka Team

Published : Mar 8, 2024, 5:10 PM IST

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (ಎಸ್‌ಹೆಚ್‌ಎಲ್‌ಸಿಸಿ) 63ನೇ ಸಭೆಯಲ್ಲಿ ರಾಜ್ಯಾದ್ಯಂತ 27,067 ಉದ್ಯೋಗಗಳನ್ನು ಸೃಷ್ಟಿಸುವ 17,835.9 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ದೊರೆತಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅನುಮೋದನೆಗೊಂಡ ಯೋಜನೆಗಳ ಪೈಕಿ 8,220.05 ಕೋಟಿ ಮೊತ್ತದ 6 ಹೊಸ ಯೋಜನೆಗಳು ಮತ್ತು 9,615.85 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳು ಇವೆ. ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ದೊರೆತಿರುವ ಅನುಮತಿಗಳಿಂದ ಈ ಜಿಲ್ಲೆಗಳಲ್ಲಿ ಒಟ್ಟಾರೆ 10,433.72 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟ್ರಾನ್ ಇನ್ಫೊಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2,095 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ ಆರಂಭಿಸಲಿದೆ. ಇದರಿಂದ 21,723 ಜನರಿಗೆ ಉದ್ಯೋಗಗಳು ದೊರೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಉಪಸ್ಥಿತರಿದ್ದರು.

ಹೊಸ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು:ರಾಜ್ಯದಲ್ಲಿ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲಿರುವ ಒಟ್ಟು 6 ಕಂಪನಿಗಳಾದ - ಎಸ್‍ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಕೇನ್ ಪವರ್ ಲಿಮಿಟೆಡ್, ಐ.ಸಿ.ಟಿ ಸರ್ವಿಸ್ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಶ್ರೀ ಬಾಲಾಜಿ ಷುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ಲಿಮಿಟೆಡ್‌ನ ಒಟ್ಟು 8,220.05 ಕೋಟಿ ಮೊತ್ತದ ಬಂಡವಾಳ ಹೂಡಿಕೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಈ ಹೊಸ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 27,067 ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು:ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಸಾಮರ್ಥ್ಯ ವಿಸ್ತರಣೆ ಉದ್ದೇಶದ ಹೆಚ್ಚುವರಿ ಹೂಡಿಕೆಯ 8 ಪ್ರಸ್ತಾವನೆಗಳಿಗೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಂಡವಾಳ ಹೂಡಿಕೆ ಹೆಚ್ಚಳದ ಪ್ರಸ್ತಾವನೆಗಳಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಆರ್‌ಬಿಎಸ್‌ಎಸ್‌ಎನ್‌ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಎಂವಿ ಎನರ್ಜಿ ಪ್ರೈವೇಟ್ ಲಿಮಿಟೆಡ್ (ಈ ಹಿಂದಿನ ಎಂವೆ ಫೋಟೊ ವೋಲ್ಟಾಯಿಕ್ ಪವರ್ ಪ್ರೈವೇಟ್ ಲಿಮಿಟೆಡ್), ಇಂಡಿಯನ್ ಕೇನ್ ಪವರ್ ಲಿಮಿಟೆಡ್ (ಅಳಗವಾಡಿ ಬೀರೇಶ್ವರ ಷುಗರ್ಸ್ ಘಟಕ), ಗ್ರೀನ್ಕೊ ಕೆಎ01 ಐಆರ್‍ಇಪಿ ಪ್ರೈವೇಟ್ ಲಿಮಿಟೆಡ್ (ಈ ಹಿಂದಿನ ಗ್ರೀನ್ಕೊ ಸೋಲಾರ್ ಎನರ್ಜಿ ಪ್ರೈವೇಟ್ ಲಿಮಿಟೆಡ್), ಅಥಣಿ ಷುಗರ್ಸ್ ಲಿಮಿಟೆಡ್, ಉಕೆಮ್ ಅಗ್ರಿ ಇನ್‌ಫ್ರಾ ಲಿಮಿಟೆಡ್ ಮತ್ತು ಸ್ನೈಡರ್ ಎಲೆಕ್ಟ್ರಿಕ್ ಐಟಿ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿವೆ. ಇವುಗಳ ಹೆಚ್ಚುವರಿ ಹೂಡಿಕೆಯ ಮೊತ್ತವು 9,615.85 ಕೋಟಿಗಳಷ್ಟಿದೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎಸ್‍ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನಿಂದ 1,352.3 ಕೋಟಿ ರೂ. ವೆಚ್ಚದಲ್ಲಿ ಡೇಟಾ ಸೆಂಟರ್‌ ನಿರ್ಮಾಣ. 250 ಉದ್ಯೋಗ ನಿರೀಕ್ಷೆ.
  • ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟ್ರಾನ್ ಇನ್ಫೊಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನಿಂದ 2095 ಕೋಟಿ ರೂ ಹೂಡಿಕೆಯಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ. 21723 ಉದ್ಯೋಗ ನಿರೀಕ್ಷೆ.
  • ವಿಜಯಪುರ ಜಿಲ್ಲೆ ಕಂಬಾಗಿ ಹಾಗೂ ಶೇಗುಣಶಿ ಗ್ರಾಮಗಳ ವ್ಯಾಪ್ತಿಯಲ್ಲಿ ಇಂಡಿಯನ್ ಕೇನ್ ಪವರ್ ಲಿಮಿಟೆಡ್​ನಿಂದ 1078 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ, 309 ಉದ್ಯೋಗ ನಿರೀಕ್ಷೆ.
  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್​ನಲ್ಲಿ ಶ್ರೀ ಬಾಲಾಜಿ ಷುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್​ನಿಂದ 494.75 ಕೋಟಿ ಹೂಡಿಕೆಯಲ್ಲಿ ಸಕ್ಕರೆ ಕಾರ್ಖಾನೆಯ ಸಾಮರ್ಥ್ಯ ವೃದ್ಧಿ, 1085 ಉದ್ಯೋಗ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಐ.ಸಿ.ಟಿ ಸರ್ವಿಸ್ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್​ನಿಂದ 1,450 ಕೋಟಿ ರೂ ಹೂಡಿಕೆಯಲ್ಲಿ ರಕ್ಷಣಾ ಹಾಗೂ ವೈಮಾಂತರಿಕ್ಷ ಪಾರ್ಕ್‌. ಲ್ಯಾಪ್‌ಟಾಪ್‌ ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕಾ ಘಟಕ. 2500 ಉದ್ಯೋಗ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಏರ್ ಇಂಡಿಯಾ ಲಿಮಿಟೆಡ್​ನಿಂದ ವಿಮಾನಗಳ ನಿರ್ವಹಣೆ ಹಾಗೂ ದುರಸ್ತಿ ಘಟಕ, 1750 ಕೋಟಿ ರೂ. ಹೂಡಿಕೆ, 1200 ಉದ್ಯೋಗ

ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು:

  • ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಕಲಬುರಗಿ ಜಿಲ್ಲೆಯಲ್ಲಿ ಗಣಿಗಾರಿಕೆ 490.38 ಕೋಟಿ ರೂ. ಹೂಡಿಕೆ
  • ಆರ್‌ಬಿಎಸ್‌ಎಸ್‌ಎನ್‌ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ - ಬಳ್ಳಾರಿ ಜಿಲ್ಲೆಯಲ್ಲಿ 130 ಮೆಗಾವಾಟ್‌ ವಿದ್ಯುತ್‌ ಘಟಕ - 1620.80 ಕೋಟಿ ರೂ. ಹೂಡಿಕೆ
  • ಎಂವಿ ಎನರ್ಜಿ ಪ್ರೈವೇಟ್ ಲಿಮಿಟೆಡ್ - ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೌರಫಲಕಗಳ ತಯಾರಿಕಾ ಘಟಕ - 676.28 ಕೋಟಿ ರೂ. ಹೂಡಿಕೆ
  • ಇಂಡಿಯನ್ ಕೇನ್ ಪವರ್ ಲಿಮಿಟೆಡ್ - ಬೆಳಗಾವಿ ಜಿಲ್ಲೆ ಅಳಗವಾಡಿ ಬೀರೇಶ್ವರ ಷುಗರ್ಸ್ ಸಕ್ಕರೆ ಕಾರ್ಖಾನೆಯ ಸಾಮರ್ಥ್ಯ ವೃದ್ಧಿ - 492.29 ಕೋಟಿ ರೂ. ಹೂಡಿಕೆ
  • ಗ್ರೀನ್ಕೊ ಕೆಎ01 ಐಆರ್ ಇಪಿ ಪ್ರೈವೇಟ್ ಲಿಮಿಟೆಡ್ - ಬೆಳಗಾವಿ ಜಿಲ್ಲೆ – ಜಲ ಸಂಗ್ರಹಾಗಾರದ (ಪಂಪ್ಡ್‌ ಸ್ಟೋರೇಜ್‌) ಸಾಮರ್ಥ್ಯ ವೃದ್ಧಿ - 5948.06 ಕೋಟಿ ರೂ. ಹೂಡಿಕೆ
  • ಅಥಣಿ ಷುಗರ್ಸ್ ಲಿಮಿಟೆಡ್, ಬೆಳಗಾವಿ ಜಿಲ್ಲೆ - ಡಿಸ್ಟಿಲರಿ ಘಟಕದ ವಿಸ್ತರಣೆ - 205.89 ಕೋಟಿ ರೂ. ಹೂಡಿಕೆ
  • ಉಕೆಮ್ ಅಗ್ರಿ ಇನ್ಫ್ರಾ ಲಿಮಿಟೆಡ್, ಕೊಪ್ಪಳ ಜಿಲ್ಲೆ - ಸಕ್ಕರೆ ಕಾರ್ಖಾನೆಯ ಸಾಮರ್ಥ್ಯ ಹೆಚ್ಚಳ - 103.55 ಕೋಟಿ ರೂ.
  • ಸ್ನೈಡರ್ ಇಲೆಕ್ಟ್ರಿಕ್ ಐಟಿ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ - ಬೆಂಗಳೂರು ನಗರ ಜಿಲ್ಲೆ - ಎಲೆಕ್ಟ್ರಾನಿಕ್‌ ಪರಿಕರಗಳ ತಯಾರಿಕಾ ಘಟಕ - 78.60 ಕೋಟಿ ರೂ. ಹೂಡಿಕೆ.

ಇದನ್ನೂ ಓದಿ: ರಾಜ್ಯದಲ್ಲಿ ಟಾಟಾ ಸಮೂಹದಿಂದ 2,300 ಕೋಟಿ ರೂ. ಹೂಡಿಕೆ: ಮಹತ್ವದ ಒಪ್ಪಂದಕ್ಕೆ ಅಸ್ತು

ABOUT THE AUTHOR

...view details